ADVERTISEMENT

ಕರ್ಣಾಟಕ ಬ್ಯಾಂಕ್‌ಗೆ ₹175.42 ಕೋಟಿ ಲಾಭ

ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಶೇ 7.46 ರಷ್ಟು ಪ್ರಗತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 17:37 IST
Last Updated 12 ಜುಲೈ 2019, 17:37 IST
ಮಹಾಬಲೇಶ್ವರ್ ಎಂ.ಎಸ್‌.
ಮಹಾಬಲೇಶ್ವರ್ ಎಂ.ಎಸ್‌.   

ಮಂಗಳೂರು: ಕರ್ಣಾಟಕ ಬ್ಯಾಂಕ್, ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಶೇ 7.46 ಪ್ರಗತಿಯೊಂದಿಗೆ ಸಾರ್ವಕಾಲಿಕ ದಾಖಲೆಯ ₹175.42 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ ₹163.24 ಕೋಟಿ ಲಾಭ ಗಳಿಸಿತ್ತು. ಬ್ಯಾಂಕಿನ ಒಟ್ಟು ವ್ಯವಹಾರವು ಜೂನ್‌ 30ರ ಅಂತ್ಯಕ್ಕೆ ₹1,21,339 ಕೋಟಿ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ 9.85 ರಷ್ಟು ಬೆಳವಣಿಗೆ ಸಾಧಿಸಿದೆ. ಬ್ಯಾಂಕಿನ ಠೇವಣಿಗಳ ಮೊತ್ತವು ₹62,275 ಕೋಟಿಗಳಿಂದ ₹68,520 ಕೋಟಿಗಳಿಗೆ ತಲುಪಿದ್ದು, ವಾರ್ಷಿಕ ಶೇ 9.24ರಷ್ಟು ಬೆಳವಣಿಗೆ ಸಾಧಿಸಿದೆ. ಬ್ಯಾಂಕಿನ ಮುಂಗಡಗಳು ₹47,731 ಕೋಟಿಗಳಿಂದ ₹52,818 ಕೋಟಿ ತಲುಪಿದ್ದು, ಶೇ 10.66 ರಷ್ಟು ವೃದ್ಧಿ ದಾಖಲಿಸಿದೆ.

ಬ್ಯಾಂಕಿನ ಸಿಡಿ ಅನುಪಾತ (ಮುಂಗಡ ಮತ್ತು ಠೇವಣಿಗಳ ಅನುಪಾತ) ಉತ್ತಮಗೊಂಡಿದ್ದು, ಶೇ 77.08ರಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 76.10 ರಷ್ಟಿತ್ತು. ಬ್ಯಾಂಕಿನ ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಜಿಎನ್‌ಪಿಎ) ಇಳಿಕೆ ಕಂಡಿದ್ದು, ಶೇ 4.55 ರಷ್ಟಿವೆ. ಅದು ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 4.72 ರಷ್ಟಿತ್ತು.

ADVERTISEMENT

‘ಹೊಸ ಆರ್ಥಿಕ ವರ್ಷದ ವಹಿವಾಟನ್ನು ದಾಖಲೆಯ ನಿವ್ವಳ ಲಾಭವನ್ನು ಘೋಷಿಸುವುದರೊಂದಿಗೆ ಆರಂಭ ಮಾಡಿದ್ದೇವೆ. ಈ ಸಾಧನೆಯ ವೇಗವನ್ನು ಮುಂಬರುವ ದಿನಗಳಲ್ಲೂ ಕಾಯ್ದುಕೊಳ್ಳುವ ವಿಶ್ವಾಸ ಹೊಂದಿದ್ದೇವೆ. ಮಾರುಕಟ್ಟೆಯಲ್ಲಿನ ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆಯೂ ಈ ಸಾಧನೆ ಗಮನಾರ್ಹವಾದುದು’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್ ತಿಳಿಸಿದ್ದಾರೆ.

‘ದೂರದೃಷ್ಟಿ ಹೊಂದಿದ ನಮ್ಮ ವಿನೂತನವಾದ ಬ್ಯಾಂಕಿಂಗ್ ಸೌಲಭ್ಯಗಳ ವಿತರಣಾ ವ್ಯವಸ್ಥೆ ಹಾಗೂ ಮಾನವ ಸಂಪನ್ಮೂಲಗಳ ಅಭಿವೃದ್ಧಿಯಂತಹ ಕ್ರಮಗಳು ಈಗ ಫಲ ನೀಡಲಾರಂಭಿಸಿವೆ. ಮುಂಬರುವ ದಿನಗಳಲ್ಲಿ ಬ್ಯಾಂಕ್ ಮತ್ತಷ್ಟು ಸದೃಢವಾಗಿ ಹೊರಹೊಮ್ಮಲಿದೆ. ಅಭಿವೃದ್ಧಿಯ ಹೊಸ ಮೈಲುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಮತ್ತಷ್ಟು ಶ್ರಮಿಸಲು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.