
ನಾಪೋಕ್ಲು (ಕೊಡಗು ಜಿಲ್ಲೆ): ಹತ್ತು ದಿನಗಳ ಹಿಂದೆ ಸುರಿದ ಮಳೆಯು ಸಂತಸದಲ್ಲಿದ್ದ ಕಾಫಿ ಬೆಳೆಗಾರರನ್ನು ಚಿಂತಿತರನ್ನಾಗಿಸಿದೆ. ಹೋಬಳಿ ವ್ಯಾಪ್ತಿಯ ತೋಟಗಳಲ್ಲಿ ಕಾಫಿ ಹೂಗಳು ಅರಳಿದ್ದು ತೋಟವೆಲ್ಲ ಘಮಘಮಿಸುತ್ತಿದ್ದರೂ, ಬೆಳೆಗಾರರ ಮುಖದಲ್ಲಿ ಮಂದಹಾಸ ಕಾಣುತ್ತಿಲ್ಲ.
ಸಾಮಾನ್ಯವಾಗಿ ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಅರಳುತ್ತಿದ್ದ ಹೂಗಳು ತಿಂಗಳ ಮೊದಲೇ ಅರಳಿವೆ. ತೋಟಗಳಲ್ಲಿ ಭಾಗಶಃ ಹೂಗಳು ಅರಳಿದ್ದು, ಮುಂಬರುವ ಬೆಳೆ ಹೇಗೋ ಎಂಬ ಆತಂಕವನ್ನು ತಂದೊಡ್ಡಿದೆ.
ನಾಲ್ಕುನಾಡು ವ್ಯಾಪ್ತಿಯ ಕಕ್ಕಬ್ಬೆ, ಕುಂಜಿಲ, ನೆಲಜಿ, ಬಲ್ಲಮಾವಟಿ, ಚೋನಕೆರೆ ಸೇರಿ ಹಲವು ಗ್ರಾಮಗಳಲ್ಲಿ ಕಾಫಿಕೊಯ್ಲು ಆರಂಭಗೊಂಡಿದೆ. ಇದೇ ವೇಳೆಗೆ ಮಳೆಯ ಸಿಂಚನವಾಗಿ ಹೂಗಳು ಅರಳಿರುವುದರಿಂದ ಕೊಯ್ಲು ಕೆಲಸವನ್ನು ಅನಿವಾರ್ಯವಾಗಿ ಬೆಳೆಗಾರರು ಸ್ಥಗಿತಗೊಳಿಸಿದ್ದಾರೆ.
‘ಜನವರಿ ಮತ್ತು ಫೆಬ್ರವರಿ ತಿಂಗಳು ಕಾಫಿ ಕೊಯ್ಲಿನ ಬಿರುಸಿನ ದಿನಗಳು. ಕಾಫಿ ಕೊಯ್ಲಾದ ಬಳಿಕ ಮಳೆ ಸುರಿದರೆ ಕಾಫಿಯ ಮೊಗ್ಗು ಅರಳಿ ಮುಂದಿನ ವರ್ಷದ ಫಸಲು ನಿರ್ಧಾರವಾಗುತ್ತದೆ. ಆದರೆ, ಈ ಬಾರಿ ಇನ್ನೂ ಕಾಫಿ ಕೊಯ್ಲು ಮುಗಿದಿಲ್ಲ. ಆಗಲೇ ಮಳೆಯಾಗಿ, ಹೂ ಅರಳಿರುವುದರಿಂದ ಕೊಯ್ಲು ಸಾಧ್ಯವಾಗುತ್ತಿಲ್ಲ. ಮಳೆಯಿಂದ ಹಣ್ಣಾದ ಕಾಫಿ ಸಹ ನೆಲಕಚ್ಚುತ್ತಿವೆ’ ಎಂದು ನೆಲಜಿ ಗ್ರಾಮದ ಬೆಳೆಗಾರ ಕುಶಾಲಪ್ಪ ಅಳಲು ತೋಡಿಕೊಂಡರು. ಸದ್ಯ ಬಿಸಿಲು ಹೆಚ್ಚಿದ್ದು ಕಾಫಿ ಒಣಗಿಸುವ ಕೆಲಸ ಭರದಿಂದ ಸಾಗಿದೆ.
‘ಕಾಫಿ ಕೊಯ್ಲಿನೊಂದಿಗೆ ಹೂಗಳನ್ನು ಜತನದಿಂದ ಕಾಯ್ದುಕೊಳ್ಳಬೇಕಾಗಿದೆ. ಫೆಬ್ರುವರಿ ಅಂತ್ಯದಲ್ಲಿ ಮಳೆ ಸುರಿದಿದ್ದರೆ ಹೆಚ್ಚು ಪ್ರಯೋಜನಕಾರಿಯಾಗುತ್ತಿತ್ತು. ತೋಟದ ಎಲ್ಲಾ ಕೆಲಸಗಳಿಗೆ ಅಡಚಣೆಯಾಗಿದೆ’ ಎಂದು ಬಲ್ಲಮಾವಟಿ ಗ್ರಾಮದ ಬೆಳೆಗಾರ ಮಾಚಯ್ಯ ಹೇಳಿದರು.
ಕೊಡಗಿನ ಕೆಲವೆಡೆ ಈಚೆಗೆ ಸುರಿದ ಮಳೆಯಿಂದ ರೊಬೊಸ್ಟಾ ಕಾಫಿ ಹೂ ಅರಳಿದೆ. ಇದು ಮುಂದಿನ ಬೆಳೆಯ ಇಳುವರಿ ಮೇಲೆ ಪರಿಣಾಮ ಬೀರಲಿದೆ.– ಚಂದ್ರಶೇಖರ್, ಕಾಫಿ ಮಂಡಳಿ ಉಪನಿರ್ದೇಶಕ
ಗಿಡದಲ್ಲಿಯೇ ಒಣಗುತ್ತಿದೆ ಕಾಫಿ ಹಣ್ಣು
ಚಿಕ್ಕಮಗಳೂರು: ಹತ್ತು ದಿನಗಳ ಹಿಂದೆ ಸುರಿದ ಮಳೆಯಿಂದ ಕಾಫಿ ಹೂವುಗಳು ಅರಳಿದ್ದು, ಇದು ಬೆಳೆಗಾರರ ಬದುಕನ್ನು ಮಂಕಾಗಿಸಿದೆ.
ಕಾಫಿ ಹಣ್ಣು ಕೊಯ್ಲಿನ ಸಂದರ್ಭದಲ್ಲಿ ಹೂವು ಅರಳಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಈಗ ಹೂವು ಅರಳಿದರೆ ಮುಂದಿನ ವರ್ಷದ
ಫಸಲಿನ ಮೇಲೆ ಪರಿಣಾಮ ಬೀರಲಿದೆ. ಶೇ 50ರಷ್ಟು ಇಳುವರಿ ಕಡಿಮೆಯಾಗಲಿದೆ ಎಂಬುದು ಬೆಳೆಗಾರರ ಆತಂಕವಾಗಿದೆ.
ಯುಗಾದಿ ನಂತರ ಬರುವ ರೋಹಿಣಿ ಮಳೆಯನ್ನು ಹೂವಿನ ಮಳೆ ಎಂದು ಕಾಫಿ ಬೆಳೆಗಾರರು ಕರೆಯುತ್ತಾರೆ. ಆದರೆ, ಈ ವರ್ಷ ಜನವರಿಯಲ್ಲಿ ಸುರಿದ ಮಳೆಯಿಂದಾಗಿ ಯಾವುದೇ ಕಾಫಿ ತೋಟಕ್ಕೆ ಹೋದರೂ ಹೂವಿನ ಪರಿಮಳ ಹರಡಿದೆ. ಇನ್ನು ನೀರು ಸಿಗದಿದ್ದರೆ ಈಗ ಅರಳಿರುವ ಹೂವು ಉದುರಿ ಹೋಗಲಿದ್ದು, ಮುಂದಿನ ವರ್ಷದ ಫಸಲು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಬೆಳೆಗಾರರು ಅಂದಾಜಿಸಿದ್ದಾರೆ.
‘ಈ ಮಳೆ ಎರಡು ವರ್ಷಗಳ ಫಸಲನ್ನು ಆಹುತಿ ಪಡೆದಿದೆ. ಹಣ್ಣಿನ ಮೇಲೆ ಮಳೆಯಾಗಿದ್ದರಿಂದ ಕಾಫಿ ಹಣ್ಣು ಗಿಡದಲ್ಲಿಯೇ ಒಣಗುತ್ತಿದ್ದು, ಬೆಳೆಗಾರರು ನಷ್ಟ
ಅನುಭವಿಸುವಂತಾಗಿದೆ. ಮಳೆಯಿಂದ ಪೂರ್ಣ ಪ್ರಮಾಣದಲ್ಲಿ ಹೂವಾಗದ ಕಾರಣ ಮುಂದಿನ ಫಸಲಿಗೂ ನಷ್ಟವಾಗಿದೆ’ ಎಂದು ಬೆಳೆಗಾರರು ಹೇಳುತ್ತಾರೆ.
ಈ ಅಕಾಲಿಕ ಮಳೆ ಅರೇಬಿಕಾ ಕಾಫಿಗಿಂತ ರೊಬಸ್ಟಾ ಕಾಫಿಗೆ ಹೆಚ್ಚು ಹಾನಿ ಮಾಡಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.