ADVERTISEMENT

ಆಸ್ತಿ ನೋಂದಣಿ: ಆಧಾರ್‌ ಬಳಕೆಗೆ ಅಸ್ತು

ಭರತ್ ಜೋಶಿ
Published 25 ಮೇ 2023, 0:44 IST
Last Updated 25 ಮೇ 2023, 0:44 IST
   

ಬೆಂಗಳೂರು: ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲು ಆಧಾರ್‌ ಬಳಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಒಬ್ಬರ ಆಸ್ತಿಯನ್ನು ಬೇರೊಬ್ಬರು ಮಾರಾಟ ಮಾಡುವುದನ್ನು ತಡೆಯುವ ಉದ್ದೇಶದಿಂದ ಕಂದಾಯ ಇಲಾಖೆ ಈ ಕ್ರಮ ಕೈಗೊಂಡಿದೆ.

ಈವರೆಗೆ ವಿವಿಧ ಗುರುತಿನ ದಾಖಲೆಗಳು ಮತ್ತು ಸಹಿಗಳನ್ನು ಬಳಸಿಕೊಂಡು ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಗುರುತಿನ ಚೀಟಿಗಳ ಆಧಾರದಲ್ಲೇ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ನೈಜ ಮಾಲೀಕರಲ್ಲದವರು ಮಾರಾಟಗಾರರೆಂದು ಬಿಂಬಿಸಿಕೊಳ್ಳುವ ಅಪಾಯ ಇತ್ತು.

ಕಂದಾಯ ಇಲಾಖೆಯ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ, ಭೂಮಿ, ನಗರ ಆಸ್ತಿ ಮಾಲೀಕತ್ವದ ದಾಖಲೆಗಳ ವಿಭಾಗಗಳು ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲು ಆಧಾರ್‌ ದತ್ತಾಂಶವನ್ನು ಬಳಸಿಕೊಳ್ಳಲು ಅನುಮತಿ ನೀಡಿ ಮೇ 18ರಂದು ಅಧಿಸೂಚನೆ ಹೊರಡಿಸಲಾಗಿದೆ.

ADVERTISEMENT

ಸ್ಥಿರಾಸ್ಥಿ ನೋಂದಣಿ ಪ್ರಕ್ರಿಯೆಯಲ್ಲಿ ಆಧಾರ್‌ ಬಳಕೆಗೆ ಕೇಂದ್ರ ಸರ್ಕಾರವು ಏಪ್ರಿಲ್‌ನಲ್ಲಿ ಅನುಮತಿ ನೀಡಿತ್ತು. ಆ ಬಳಿಕ ರಾಜ್ಯ ಸರ್ಕಾರವೂ ಅದೇ ಕ್ರಮ ಕೈಗೊಂಡಿದೆ.

‘ಒಬ್ಬರ ಹೆಸರಿನ ಆಸ್ತಿಯನ್ನು ಬೇರೊಬ್ಬರು ಅಕ್ರಮವಾಗಿ ಮಾರಾಟ ಮಾಡುವುದನ್ನು ತಡೆಯಲು ಆಧಾರ್‌ ಬಳಕೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲ, ಒಂದೇ ಸರ್ವೆ ನಂಬರ್‌ನಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಆಸ್ತಿ ಮಾಲೀಕರಿದ್ದರೆ ಅವರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ’ ಎಂದು ಭೂ ದಾಖಲೆಗಳು ಮತ್ತು ಭೂಮಾಪನ ಇಲಾಖೆ ಆಯುಕ್ತ ಸಿ.ಎನ್‌. ಶ್ರೀಧರ ಹೇಳಿದರು.

ನೋಂದಣಿ ಪ್ರಕ್ರಿಯೆಯಲ್ಲಿ ಆಧಾರ್‌ ದತ್ತಾಂಶದ ಬಳಕೆಗೆ ಸರ್ಕಾರ ಅನುಮತಿ ನೀಡಿದ ಬಳಿಕ, ಅದನ್ನು ಅನುಷ್ಠಾನಕ್ಕೆ ತರಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ನೋಂದಣಿ ತಂತ್ರಾಂಶದಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.