ADVERTISEMENT

ಜಿಎಸ್‌ಟಿ ದಂಡ ವಿನಾಯಿತಿ, ಸಣ್ಣ ಉದ್ದಿಮೆಗಳಿಗೆ ಸಹಾಯ: ತಜ್ಞರ ಅಭಿಪ್ರಾಯ

ಪಿಟಿಐ
Published 29 ಮೇ 2021, 15:14 IST
Last Updated 29 ಮೇ 2021, 15:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾಸಿಕ ಜಿಎಸ್‌ಟಿ ವಿವರವನ್ನು ತಡವಾಗಿ ಸಲ್ಲಿಸಿದವರಿಗೆ ದಂಡ ವಿಧಿಸುವ ವಿಚಾರದಲ್ಲಿ ಕೆಲವು ವಿನಾಯಿತಿ ನೀಡುವ ಜಿಎಸ್‌ಟಿ ಮಂಡಳಿಯ ತೀರ್ಮಾನವು ಸಣ್ಣ ಉದ್ದಿಮೆಗಳಿಗೆ ನೆರವಾಗುತ್ತದೆ, ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಡುತ್ತದೆ ಎಂದು ತೆರಿಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತೆರಿಗೆ ಪಾವತಿ ಬಾಕಿ ಇಲ್ಲದಿದ್ದರೆ, 2017ರ ಜುಲೈನಿಂದ ಈ ವರ್ಷದ ಏಪ್ರಿಲ್‌ವರೆಗಿನ ಜಿಎಸ್‌ಟಿಆರ್‌–3ಬಿ ಸಲ್ಲಿಸದೆ ಇದ್ದವರಿಗೆ ಪ್ರತಿ ವಿವರಕ್ಕೆ ₹ 500ರವರೆಗೆ ದಂಡ ನಿಗದಿ ಮಾಡಲಾಗಿದೆ. ತೆರಿಗೆ ಪಾವತಿಸುವುದು ಬಾಕಿ ಇದ್ದರೆ, ಅವರು ಆಗಸ್ಟ್‌ 31ಕ್ಕೆ ಮೊದಲು ವಿವರಗಳನ್ನು ಸಲ್ಲಿಸಿದರೆ, ಪ್ರತಿ ವಿವರಕ್ಕೆ ₹ 1,000 ದಂಡ ನಿಗದಿಪಡಿಸಲಾಗಿದೆ.

₹ 2 ಕೋಟಿವರೆಗೆ ವಾರ್ಷಿಕ ವಹಿವಾಟು ಹೊಂದಿರುವವರು 2020–21ನೆಯ ಸಾಲಿನಲ್ಲಿ ತೆರಿಗೆ ವಿವರ ಸಲ್ಲಿಸುವುದು ಐಚ್ಛಿಕ ಎಂದು ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ADVERTISEMENT

‘ಸಣ್ಣ ಉದ್ದಿಮೆಗಳ ಹಿತಾಸಕ್ತಿಯನ್ನು ಜಿಎಸ್‌ಟಿ ಮಂಡಳಿಯು ಸರಿಯಾಗಿ ಗಮನಕ್ಕೆ ತೆಗೆದುಕೊಂಡಿದೆ ಎಂದು ಹೇಳಬಹುದು. ಈ ಉದ್ಯಮಗಳಿಗೆ ಅಗತ್ಯ ವಿನಾಯಿತಿ ನೀಡಿದೆ’ ಎಂದು ಇವೈ ಟ್ಯಾಕ್ಸ್ ಪಾರ್ಟ್ನರ್‌ ಸಂಸ್ಥೆಯ ಅಭಿಷೇಕ್ ಜೈನ್ ಹೇಳಿದರು.

ತೆರಿಗೆ ವಿವರ ಸಲ್ಲಿಸುವ ವಿಚಾರದಲ್ಲಿ ನೀಡಿರುವ ವಿನಾಯಿತಿಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ತೆರಿಗೆ ಪಾವತಿದಾರರಿಗೆ ತಾತ್ಕಾಲಿಕವಾಗಿ ಸಮಾಧಾನ ತರಬಹುದು ಎಂದು ಶಾರ್ದೂಲ್ ಅಮರ್‌ಚಂದ್‌ ಮಂಗಳದಾಸ್ ಆ್ಯಂಡ್‌ ಕಂಪನಿಯ ಪಾಲುದಾರ ರಜತ್ ಬೋಸ್ ಹೇಳಿದರು. ‘ಆದರೆ, ಒಟ್ಟಾರೆಯಾಗಿ ಹೇಳುವುದಾದರೆ ಉದ್ದಿಮೆಗಳ ಮತ್ತು ಸಾಮಾನ್ಯರ ಮುಖ್ಯ ಸಮಸ್ಯೆಗಳನ್ನು ಗುರುತಿಸುವಲ್ಲಿ ಜಿಎಸ್‌ಟಿ ಮಂಡಳಿ ವಿಫಲವಾಗಿದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈಗಿನ ಕ್ರಮಗಳು ಸಣ್ಣ ಉದ್ದಿಮೆಗಳಿಗೆ ಪ್ರಯೋಜನ ಮಾಡಿಕೊಡುತ್ತವಾದರೂ, ಇವುಗಳನ್ನು ಇತರ ಉದ್ದಿಮೆಗಳಿಗೂ ವಿಸ್ತರಿಸಬೇಕು ಎಂದು ಡೆಲಾಯ್ಟ್‌ ಇಂಡಿಯಾದ ಹಿರಿಯ ನಿರ್ದೇಶಕ ಎಂ.ಎಸ್. ಮಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.