ADVERTISEMENT

ಎಲ್‌ಐಸಿ ಐಪಿಒ: ಸಣ್ಣ ಹೂಡಿಕೆದಾರರಿಗೆ ರಿಯಾಯಿತಿ

ಪಿಟಿಐ
Published 26 ಏಪ್ರಿಲ್ 2022, 15:37 IST
Last Updated 26 ಏಪ್ರಿಲ್ 2022, 15:37 IST

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆಗಾಗಿ (ಐಪಿಒ) ತನ್ನ ಷೇರುಗಳ ಬೆಲೆಯನ್ನು ₹ 902–949ಕ್ಕೆ ನಿಗದಿ ಮಾಡಿದೆ. ಐಪಿಒ ಮೇ 4ರಿಂದ ಮುಕ್ತವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಐಪಿಒ ಮೂಲಕ ಕೇಂದ್ರ ಸರ್ಕಾರವು ₹ 21 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದೆ. ಎಲ್‌ಐಸಿಯು ತನ್ನ ಪಾಲಿಸಿ ಹೊಂದಿರುವ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹ 60ರಷ್ಟು ರಿಯಾಯಿತಿ ನೀಡಲಿದೆ. ಸಣ್ಣ ಹೂಡಿಕೆದಾರರಿಗೆ ಮತ್ತು ತನ್ನ ನೌಕರರಿಗೆ ₹ 40ರಷ್ಟು ರಿಯಾಯಿತಿ ಕೊಡಲಿದೆ.

ಆರಂಭಿಕ ಹೂಡಿಕೆದಾರರು (ಆ್ಯಂಕರ್ ಇನ್‌ವೆಸ್ಟರ್) ಮೇ 2ರಿಂದ ಅರ್ಜಿ ಸಲ್ಲಿಸಬಹುದು. ಈ ಐಪಿಒ ಮೂಲಕ ಕೇಂದ್ರ ಸರ್ಕಾರವು ಎಲ್‌ಐಸಿಯಲ್ಲಿ ತಾನು ಹೊಂದಿರುವ ಷೇರುಗಳ ಪೈಕಿ ಶೇಕಡ 3.5ರಷ್ಟನ್ನು (22.13 ಕೋಟಿ ಷೇರುಗಳು) ಮಾರಾಟ ಮಾಡಲಿದೆ.

ADVERTISEMENT

ಇಷ್ಟು ಷೇರುಗಳಲ್ಲಿ 2.21 ಕೋಟಿ ಷೇರುಗಳು ಎಲ್‌ಐಸಿ ಪಾಲಿಸಿ ಹೊಂದಿರುವವರಿಗಾಗಿ ಮೀಸಲಾಗಿವೆ. ನೌಕರರಿಗೆ 15 ಲಕ್ಷ ಷೇರುಗಳನ್ನು ಮೀಸಲು ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನುಳಿದ ಷೇರುಗಳ ಪೈಕಿ ಶೇ 50ರಷ್ಟನ್ನು ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ, ಶೇ 35ರಷ್ಟನ್ನು ಸಣ್ಣ ಹೂಡಿಕೆದಾರರಿಗೆ ಮತ್ತು ಶೇ 15ರಷ್ಟನ್ನು ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಾಗಿ ಇರಿಸಲಾಗುತ್ತದೆ ಎಂದು ಗೊತ್ತಾಗಿದೆ.

ಕೇಂದ್ರ ಸರ್ಕಾರವು ಎಲ್‌ಐಸಿಯಲ್ಲಿನ 31.6 ಕೋಟಿ ಷೇರುಗಳನ್ನು (ಶೇ 5ರಷ್ಟು) ಮಾರಾಟ ಮಾಡುವ ಉದ್ದೇಶವನ್ನು ಫೆಬ್ರುವರಿಯಲ್ಲಿ ಹೊಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿತ್ತು.

ಆದರೆ ರಷ್ಯಾ–ಉಕ್ರೇನ್ ಯುದ್ಧದ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಉಂಟಾದ ಅಸ್ಥಿರತೆಯಿಂದಾಗಿ ಐಪಿಒ ಯೋಜನೆಗೆ ಅಡ್ಡಿ ಆಯಿತು. ಷೇರು ವಿಕ್ರಯದ ಪ್ರಮಾಣವನ್ನು ಶೇ 3.5ಕ್ಕೆ ತಗ್ಗಿಸುವ ತೀರ್ಮಾನವನ್ನು ಕೇಂದ್ರವು ಹಿಂದಿನ ವಾರ ಕೈಗೊಂಡಿತು.

ಸೆಬಿ ನಿಯಮಗಳ ಪ್ರಕಾರ ₹ 1 ಲಕ್ಷ ಕೋಟಿಗಿಂತ ಹೆಚ್ಚಿನ ಮೌಲ್ಯದ ಕಂಪನಿಗಳು ಐಪಿಒ ಮೂಲಕ ಕನಿಷ್ಠ ಶೇ 5ರಷ್ಟು ಷೇರುಗಳನ್ನು ಮಾರಾಟ ಮಾಡಬೇಕು. ಆದರೆ, ಈ ನಿಯಮದಿಂದ ತನಗೆ ವಿನಾಯಿತಿ ನೀಡುವಂತೆ ಕೇಂದ್ರವು ಸೆಬಿಗೆ ಮನವಿ ಮಾಡಿದೆ ಎಂದು ಗೊತ್ತಾಗಿದೆ. ಎಲ್‌ಐಸಿಯ ಮಾರುಕಟ್ಟೆ ಮೌಲ್ಯವು ₹ 6 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.