ADVERTISEMENT

ನವದೆಹಲಿ | ‘ಅದಾನಿ’ಯಲ್ಲಿ ಹೂಡಿಕೆ ನಮ್ಮದೇ ನಿರ್ಧಾರ: ಎಲ್‌ಐಸಿ

ದಿ ವಾಷಿಂಗ್ಟನ್‌ ಪೋಸ್ಟ್‌ನ ವರದಿಯನ್ನು ಅಲ್ಲಗಳೆದ ಎಲ್‌ಐಸಿ

ಪಿಟಿಐ
Published 25 ಅಕ್ಟೋಬರ್ 2025, 15:07 IST
Last Updated 25 ಅಕ್ಟೋಬರ್ 2025, 15:07 IST
   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುವಂತೆ ಅಧಿಕಾರಿಗಳು ನೋಡಿಕೊಂಡಿದ್ದರು ಎಂಬ ವರದಿಯೊಂದು ಅಮೆರಿಕದ ‘ದಿ ವಾಷಿಂಗ್ಟನ್ ಪೋಸ್ಟ್‌’ನಲ್ಲಿ ಪ್ರಕಟವಾಗಿದ್ದು, ಎಲ್‌ಐಸಿಯು ಈ ವರದಿಯನ್ನು ತಳ್ಳಿಹಾಕಿದೆ.

ಅದಾನಿ ಸಮೂಹಕ್ಕೆ ಸೇರಿದ ಕಂ‍ಪನಿಗಳಲ್ಲಿ ತಾನು ಸ್ವತಂತ್ರವಾಗಿ, ಆಡಳಿತ ಮಂಡಳಿ ಒಪ್ಪಿಗೆ ನೀಡಿದ ನೀತಿಗಳಿಗೆ ಅನುಗುಣವಾಗಿ ಹೂಡಿಕೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಧೀನದ ‘ಹಣಕಾಸು ಸೇವೆಗಳ ಇಲಾಖೆ ಅಥವಾ ಬೇರೆ ಯಾವುದೇ ಸಂಸ್ಥೆಯು ಈ ಹೂಡಿಕೆಗಳಲ್ಲಿ ಯಾವುದೇ ಪಾತ್ರ ಹೊಂದಿಲ್ಲ’ ಎಂದು ಎಲ್‌ಐಸಿ ‘ಎಕ್ಸ್‌’ ಮೂಲಕ ಹೇಳಿದೆ.

ಭಾರತದ ಅತಿದೊಡ್ಡ ವಿಮಾ ಕಂಪನಿ ಎಲ್‌ಐಸಿ. ಇದು ವಿವಿಧ ಕಂಪನಿಗಳ ಹಣಕಾಸಿನ ಮೂಲಭೂತ ಅಂಶಗಳನ್ನು ಪರಿಗಣಿಸಿ, ವಿಸ್ತೃತವಾಗಿ ಪರಿಶೀಲನೆ ನಡೆಸಿ ಹೂಡಿಕೆ ತೀರ್ಮಾನ ಕೈಗೊಂಡಿದೆ. ಭಾರತದ 500 ಮುಂಚೂಣಿ ಕಂಪನಿಗಳಲ್ಲಿ ಎಲ್‌ಐಸಿ ಮಾಡಿರುವ ಹೂಡಿಕೆಯು 2014ರ ನಂತರದಲ್ಲಿ 10 ಪಟ್ಟು ಹೆಚ್ಚಾಗಿದೆ. 2014ರಲ್ಲಿ ಎಲ್‌ಐಸಿ ಹೂಡಿಕೆಯು ₹1.56 ಲಕ್ಷ ಕೋಟಿ ಇದ್ದಿದ್ದು, ಈಗ ₹15.6 ಲಕ್ಷ ಕೋಟಿ ಆಗಿದೆ.

ADVERTISEMENT

‘ಪರಿಶೀಲನೆಗಳನ್ನು ನಡೆಸುವಾಗ ಅತ್ಯುನ್ನತ ಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಜಾರಿಯಲ್ಲಿರುವ ನಿಯಮಗಳನ್ನು, ಕಾಯ್ದೆಗಳಲ್ಲಿನ ಅಂಶಗಳನ್ನು ಹಾಗೂ ನಿಯಮಗಳನ್ನು ಪಾಲನೆ ಮಾಡಿ, ಎಲ್ಲ ಭಾಗೀದಾರರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಹೂಡಿಕೆ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ’ ಎಂದು ಎಲ್‌ಐಸಿ ಹೇಳಿದೆ.

ಎಲ್‌ಐಸಿಯು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುವಂತೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದರು. ಈ ಹೂಡಿಕೆ ಮಾಡಿದ ಸಂದರ್ಭದಲ್ಲಿ ಅದಾನಿ ಸಮೂಹವು ಸಾಲದ ಹೊರೆಯನ್ನು ಹೊತ್ತಿತ್ತು, ಅಮೆರಿಕದಲ್ಲಿ ಪರಿಶೀಲನೆಗಳಿಗೆ ಗುರಿಯಾಗಿತ್ತು ಎಂದು ‘ದಿ ವಾಷಿಂಗ್ಟನ್ ಪೋಸ್ಟ್‌’ ವರದಿಯಲ್ಲಿ ಹೇಳಲಾಗಿದೆ.

ಅದಾನಿ ಸಮೂಹಕ್ಕೆ ಸೇರಿದ ಅದಾನಿ ಪೋರ್ಟ್ಸ್‌ ಆ್ಯಂಡ್‌ ಎಸ್‌ಇಜೆಡ್‌ ಕಂಪನಿಯಲ್ಲಿ ಎಲ್‌ಐಸಿ ಈ ವರ್ಷದ ಮೇ ತಿಂಗಳಲ್ಲಿ ಅಂದಾಜು ₹5 ಸಾವಿರ ಕೋಟಿ ಹೂಡಿಕೆ ಮಾಡಿದೆ. ಅದಾನಿ ಪೋರ್ಟ್ಸ್‌ ಆ್ಯಂಡ್‌ ಎಸ್‌ಇಜೆಡ್‌ ಕಂಪನಿಯು ಭಾರತದಲ್ಲಿ ‘ಎಎಎ’ ಕ್ರೆಡಿಟ್ ರೇಟಿಂಗ್ ಹೊಂದಿದೆ.

ತನ್ನ ಹೂಡಿಕೆ ತೀರ್ಮಾನಗಳಲ್ಲಿ ಹಣಕಾಸು ಸೇವೆಗಳ ಇಲಾಖೆ ಅಥವಾ ಇತರ ಯಾವುದೇ ಸಂಸ್ಥೆಗೆ ಯಾವುದೇ ಪಾತ್ರ ಇಲ್ಲ ಎಂದು ಎಲ್‌ಐಸಿ ಹೇಳಿದೆ. ವರದಿಯು ‘ಎಲ್‌ಐಸಿಯ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಪೂರ್ವಗ್ರಹ ಮೂಡುವಂತೆ ಮಾಡುವ ಉದ್ದೇಶದ, ಎಲ್‌ಐಸಿಯ ಹೆಸರನ್ನು ಹಾಳು ಮಾಡುವ ಉದ್ದೇಶದ, ದೇಶದ ಹಣಕಾಸು ವಲಯದ ಬಲಿಷ್ಠ ಬುನಾದಿಗೆ ಕೆಟ್ಟ ಹೆಸರು ತರುವ’ ಉದ್ದೇಶದ ಹೇಳಿಕೆಗಳನ್ನು ಒಳಗೊಂಡಿದೆ ಎಂದು ಎಲ್‌ಐಸಿ ಆಕ್ರೋಶ ವ್ಯಕ್ತಪಡಿಸಿದೆ.

ವಿಮಾ ಕಂಪನಿಯು ಭಾರತದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರನಾಗಿದೆ. ಎಲ್‌ಐಸಿ ನಿರ್ವಹಿಸುತ್ತಿರುವ ಆಸ್ತಿಯ ಮೊತ್ತವು ₹41 ಲಕ್ಷ ಕೋಟಿಗಿಂತ ಹೆಚ್ಚಿದೆ. ದೇಶದ ಬಹುತೇಕ ಎಲ್ಲ ಉದ್ಯಮ ಸಮೂಹ ಹಾಗೂ ಉದ್ಯಮ ವಲಯವನ್ನು ಒಳಗೊಳ್ಳುವ 351 ಕಂಪನಿಗಳಲ್ಲಿ ಎಲ್‌ಐಸಿ ಹೂಡಿಕೆ ಮಾಡಿದೆ.

ಎಲ್‌ಐಸಿಯು ಸರ್ಕಾರದ ಸಾಲಪತ್ರಗಳು ಹಾಗೂ ಖಾಸಗಿ ಕಂಪನಿಗಳ ಸಾಲಪತ್ರಗಳಲ್ಲಿ ಕೂಡ ಹೂಡಿಕೆ ಮಾಡಿದೆ. ನಿಗಮದ ಹೂಡಿಕೆಗಳು ಬೇರೆ ಬೇರೆ ವಲಯಗಳಲ್ಲಿ ಇವೆ.

ಎಲ್‌ಐಸಿಯು ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆಗಳ ಮೊತ್ತವು, ಆ ಸಮೂಹದ ಒಟ್ಟು ಸಾಲದ ಶೇ 2ರಷ್ಟಕ್ಕಿಂತ ಕಡಿಮೆ ಇದೆ. ಅಮೆರಿಕದ ಅತಿದೊಡ್ಡ ಫಂಡ್‌ಗಳಾದ ಬ್ಲ್ಯಾಕ್‌ರಾಕ್‌, ಅಪೋಲೊ, ಜಪಾನ್‌ನ ಅತಿದೊಡ್ಡ ಬ್ಯಾಂಕ್‌ಗಳಾದ ಮಿಜುಹೊ ಮತ್ತು ಎಂಯುಎಫ್‌ಜಿ, ಜರ್ಮನಿಯ ಎರಡನೆಯ ಅತಿದೊಡ್ಡ ಬ್ಯಾಂಕ್‌ ಆಗಿರುವ ಡಿ.ಜೆಡ್‌. ಬ್ಯಾಂಕ್‌ ಕೂಡ ಅದಾನಿ ಸಾಲಪತ್ರಗಳಲ್ಲಿ ಹೂಡಿಕೆ ಮಾಡಿವೆ. ಇದು ಜಾಗತಿಕ ಹೂಡಿಕೆದಾರರಲ್ಲಿ ಇರುವ ವಿಶ್ವಾಸವನ್ನು ತೋರಿಸುತ್ತಿದೆ.

ಅದಾನಿ ಸಮೂಹದ ಒಟ್ಟು ಸಾಲದ ಮೊತ್ತವು ₹2.6 ಲಕ್ಷ ಕೋಟಿಯಷ್ಟಿದೆ. ಆದರೆ ಇದಕ್ಕೆ ಪ್ರತಿಯಾಗಿ ಸಮೂಹದ ವಾರ್ಷಿಕ ಕಾರ್ಯಾಚರಣೆ ಲಾಭದ ಮೊತ್ತವು ₹90 ಸಾವಿರ ಕೋಟಿ ಇದೆ, ಸಮೂಹದ ಬಳಿ ₹60 ಸಾವಿರ ಕೋಟಿ ಹಣ ಇದೆ. ಅಂದರೆ, ಹೊಸ ಮೂಲಸೌಕರ್ಯದ ಮೇಲಿನ ಹೂಡಿಕೆಗಳನ್ನು ನಿಲ್ಲಿಸಿದರೆ ಅದಾನಿ ಸಮೂಹವು ತನ್ನ ಅಷ್ಟೂ ಸಾಲವನ್ನು ಮೂರು ವರ್ಷಗಳಲ್ಲಿ ತೀರಿಸಬಲ್ಲದು ಎಂದು ಮೂಲಗಳು ವಿವರಿಸಿವೆ. 

ಎಲ್‌ಐಸಿಯ ಈಕ್ವಿಟಿ ಹೂಡಿಕೆಗಳ ಪೈಕಿ ಅತಿಹೆಚ್ಚಿನ ಹೂಡಿಕೆ ಇರುವುದು ಅದಾನಿ ಸಮೂಹದಲ್ಲಿ ಅಲ್ಲ. ಬದಲಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌, ಐಟಿಸಿ ಮತ್ತು ಟಾಟಾ ಸಮೂಹದಲ್ಲಿ ಎಲ್‌ಐಸಿ ಅತಿಹೆಚ್ಚು ಹಣ ತೊಡಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.