ADVERTISEMENT

ಎಲ್‌ಐಸಿ ಐಪಿಒ: ಮಾರ್ಚ್‌ ಅಂತ್ಯಕ್ಕೆ ಅನುಮಾನ– ಮರ್ಚೆಂಟ್‌ ಬ್ಯಾಂಕ್‌ ಅಧಿಕಾರಿ

ಕಂಪನಿಯ ಮೌಲ್ಯಮಾಪನದಲ್ಲಿ ವಿಳಂಬ ಪರಿಣಾಮ

ಪಿಟಿಐ
Published 19 ಡಿಸೆಂಬರ್ 2021, 11:33 IST
Last Updated 19 ಡಿಸೆಂಬರ್ 2021, 11:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಹೂಡಿಕೆಯು (ಐಪಿಒ) ಪ್ರಸಕ್ತ ಹಣಕಾಸು ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ನಡೆಯುವುದು ಅನುಮಾನ ಎಂದು ಮರ್ಚೆಂಟ್‌ ಬ್ಯಾಂಕ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಈ ಕಂಪನಿಯ ಮೌಲ್ಯಮಾಪನ ಮಾಡಲು ನಿರೀಕ್ಷೆಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಪೂರ್ವಸಿದ್ಧತಾ ಕಾರ್ಯವು ಇನ್ನೂ ಮುಗಿದಿಲ್ಲ ಎಂದು ಅವರು ತಿಳಿಸಿದ್ದಾರೆ. ಎಲ್ಐಸಿಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಆ ಬಳಿಕ ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಪ್ರಕ್ರಿಯೆಗಳನ್ನು ನಡೆಸಬೇಕಿದೆ ಎಂದಿದ್ದಾರೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಷ್ಟೇ ಅಲ್ಲದೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಸಹಐಪಿಒ ಕುರಿತಾಗಿ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕಿದೆ. ಎಲ್‌ಐಸಿಯು ದೊಡ್ಡ ಕಂಪನಿ ಆಗಿರುವುದರಿಂದ ಅದರ ಮೌಲ್ಯಮಾಪನ ಮಾಡುವುದು ಬಹಳ ಸಂಕೀರ್ಣವಾದ ಪ್ರಕ್ರಿಯೆ ಆಗಿದೆ. ಅದರ ರಿಯಲ್ ಎಸ್ಟೇಟ್ ಸ್ವತ್ತುಗಳು, ಅಂಗಸಂಸ್ಥೆಗಳು, ಲಾಭದ ಹಂಚಿಕೆಯ ಸ್ವರೂಪ ಮತ್ತು ಷೇರು ಮಾರಾಟದ ಗಾತ್ರವು ಮೌಲ್ಯಮಾಪನವನ್ನು ಅವಲಂಬಿಸಿರುತ್ತದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಮಿಲಿಮನ್‌ ಅಡ್ವೈಸರಿ ಎಲ್‌ಎಲ್‌ಪಿ ಇಂಡಿಯಾ ಕಂಪನಿಯು ಎಲ್‌ಐಸಿಯ ಮೌಲ್ಯದ ಅಂದಾಜು ಮಾಡುತ್ತಿದೆ. ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (ಸಿಸಿಇಎ) ಎಲ್‌ಐಸಿ ಐಪಿಒಗೆ ಜುಲೈನಲ್ಲಿ ತಾತ್ವಿಕ ಒಪ್ಪಿಗೆ ನೀಡಿತು. ಆ ಬಳಿಕ ಕೇಂದ್ರ ಸರ್ಕಾರವು 10 ಮರ್ಚೆಂಟ್‌ ಬ್ಯಾಂಕರ್‌ಗಳನ್ನು ನೇಮಿಸಿದೆ.

ಕೇಂದ್ರ ಸರ್ಕಾರದ ಷೇರು ವಿಕ್ರಯ ಗುರಿ ತಲುಪಲು ಎಲ್‌ಐಸಿ ಐಪಿಒ ಬಹಳ ಮುಖ್ಯವಾಗಿದೆ. ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದ ಮೂಲಕ ₹ 1.75 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.