ADVERTISEMENT

ಅದಾನಿ ಸಮೂಹಕ್ಕೆ ಸಾಲ: ಬ್ಯಾಂಕ್‌ಗಳಿಗೆ ಅಪಾಯವಿಲ್ಲ

ರೇಟಿಂಗ್ ಸಂಸ್ಥೆಗಳ ಅಂದಾಜು * ದೇಶದ ಬೆಳವಣಿಗೆ ಮೇಲೆ ದುಷ್ಪರಿಣಾಮ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 21:12 IST
Last Updated 7 ಫೆಬ್ರುವರಿ 2023, 21:12 IST
adani
adani   

ನವದೆಹಲಿ (ಪಿಟಿಐ): ದೇಶದ ಬ್ಯಾಂಕ್‌ ಗಳು ಅದಾನಿ ಸಮೂಹಕ್ಕೆ ನೀಡಿರುವ ಸಾಲದ ಪ್ರಮಾಣವು ಅವುಗಳ ಸಾಲ ನೀಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವಷ್ಟು ದೊಡ್ಡದಾಗಿ ಇಲ್ಲ ಎಂದು ಜಾಗತಿಕ ಮಟ್ಟದ ರೇಟಿಂಗ್ ಏಜೆನ್ಸಿಗಳಾದ ಫಿಚ್ ಮತ್ತು ಮೂಡಿಸ್‌ ಹೇಳಿವೆ.

‘ಅದಾನಿ ಸಮೂಹಕ್ಕೆ ನೀಡಿರುವ ಸಾಲವು ಬ್ಯಾಂಕ್‌ಗಳ ಸಾಲ ನೀಡುವ ಸಾಮರ್ಥ್ಯಕ್ಕೆ ಗಣನೀಯವಾಗಿ ಅಪಾಯ ತರುವ ಮಟ್ಟದಲ್ಲಿ ಇಲ್ಲ’ ಎಂದು ಫಿಚ್ ಹೇಳಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಗಳು ಅದಾನಿ ಸಮೂಹಕ್ಕೆ ನೀಡಿರುವ ಸಾಲದ ಪ್ರಮಾಣವು ಖಾಸಗಿ ಬ್ಯಾಂಕ್‌ ಗಳು ನೀಡಿರುವ ಸಾಲಕ್ಕಿಂತ ಹೆಚ್ಚಿದೆ. ಆದರೆ, ಸರ್ಕಾರಿ ಬ್ಯಾಂಕ್‌ಗಳು ನೀಡಿ
ರುವ ಸಾಲವು ಅವುಗಳ ಒಟ್ಟು ಸಾಲದ ಶೇ 1ಕ್ಕಿಂತ ಕಡಿಮೆ ಎಂದು ಮೂಡಿಸ್‌ ಹೇಳಿದೆ.

‘ಕಾರ್ಪೊರೇಟ್‌ ಸಂಸ್ಥೆಗಳು ಈಚಿನ ಕೆಲವು ವರ್ಷಗಳಲ್ಲಿ ತಮ್ಮ ಸಾಲದ ಹೊರೆಯನ್ನು ತಗ್ಗಿಸಿಕೊಂಡಿವೆ. ಬ್ಯಾಂಕ್‌ಗಳು ಕಾರ್ಪೊರೇಟ್‌ ವಲಯಕ್ಕೆ ನೀಡಿರುವ ಸಾಲದ ಮೊತ್ತದಲ್ಲಿ ಹೆಚ್ಚಿನ ಬೆಳವಣಿಗೆ ಆಗಿಲ್ಲದಿರುವುದು ಇದನ್ನು ಸ್ಪಷ್ಟಪಡಿಸುತ್ತಿದೆ’ ಎಂದು ಮೂಡಿಸ್ ಹೇಳಿದೆ.

ADVERTISEMENT

ಅಗತ್ಯ ಎದುರಾದರೆ ಬ್ಯಾಂಕ್‌ಗಳಿಗೆ ಸರ್ಕಾರದ ಕಡೆಯಿಂದ ವಿಶೇಷ ಬೆಂಬಲ ಸಿಗುತ್ತದೆ ಎಂಬ ನಿರೀಕ್ಷೆ ಕೂಡ ಬ್ಯಾಂಕ್‌ಗಳ ರೇಟಿಂಗ್ಸ್ ತೀರ್ಮಾನಿಸುವಾಗ ಪರಿಗಣನೆಗೆ ಬರುತ್ತದೆ ಎಂದು ಫಿಚ್ ಹೇಳಿದೆ.

ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು, ಅದಾನಿ ಸಮೂಹದ ವಿರುದ್ಧ ಆರೋಪಗಳಿರುವ ವರದಿ ಪ್ರಕಟಿಸಿದ ನಂತರದಲ್ಲಿ ಸಮೂಹದ ಕಂಪನಿಗಳ ಷೇರುಮೌಲ್ಯ ಕುಸಿದಿದೆ. ವರದಿಯನ್ನು ಸಮೂಹವು ಅಲ್ಲಗಳೆದಿದೆ.

ಫಿಚ್‌ ಸಂಸ್ಥೆಯು ಎಚ್ಚರಿಕೆಯ ಒಂದು ಮಾತನ್ನು ಕೂಡ ಹೇಳಿದೆ. ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಈಗ ಆಗುತ್ತಿರುವ ಬೆಳವಣಿಗೆಯು ಮಧ್ಯಮಾವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು ಎಂದು ಫಿಚ್ ಅಂದಾಜು ಮಾಡಿದೆ.

‘ಅದಾನಿ ಸಮೂಹಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಕೆಟ್ಟ ಪರಿಣಾಮವಾಗಿ ಭಾರತದ ಇತರ ಕಾರ್ಪೊರೇಟ್‌ ಕಂಪನಿ
ಗಳಿಗೆ ಬಂಡವಾಳ ತರುವುದು ದುಬಾರಿಯ ಬಾಬತ್ತಾಗಬಹುದು. ಆದರೆ ಇಂತಹ ಅಪಾಯ ಎದುರಾಗುವ ಸಾಧ್ಯತೆ
ಕಡಿಮೆ’ ಎಂದು ಫಿಚ್ ಹೇಳಿದೆ.

ದೇಶದ ಮೂಲಸೌಕರ್ಯ ನಿರ್ಮಾಣ ವಲಯದಲ್ಲಿ ಅದಾನಿ ಸಮೂಹವು ಮಹತ್ವದ ಪಾತ್ರ ನಿಭಾಯಿಸುತ್ತ ಬಂದಿದೆ ಎಂದು ಫಿಚ್ ಹೇಳಿದೆ. ‘ಸರ್ಕಾರ ಹೊಂದಿರುವ ಮೂಲಸೌಕರ್ಯ ನಿರ್ಮಾಣ ಯೋಜನೆಗಳಿಗೆ ಕೊಡುಗೆ ನೀಡುವ ಸಮೂಹದ ಯೋಜನೆಗಳಿಗೆ ತೊಂದರೆ ಆದಲ್ಲಿ, ದೇಶದ ಸುಸ್ಥಿರ ಆರ್ಥಿಕ ಬೆಳವಣಿಗೆ ದರವು ತಗ್ಗಬಹುದು. ಆದರೆ ದೇಶದ ಬೆಳವಣಿಗೆಯ ಮೇಲಿನ ಪರಿಣಾಮವು ಸಣ್ಣದಾಗಿರುತ್ತದೆ ಎಂಬುದು ನಮ್ಮ ನಂಬಿಕೆ’ ಎಂದು ಫಿಚ್ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.