ADVERTISEMENT

ದೀರ್ಘಾವಧಿ ಗುರಿ ಸಾಧನೆಗೆ ‘ಯುಲಿಪ್‌’

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 19:30 IST
Last Updated 15 ಜನವರಿ 2019, 19:30 IST
INVESTMENT
INVESTMENT   

ನೀ ವು ಒಬ್ಬ ಪಾಲಕರಾಗಿ ಯೋಚಿಸುವವರಾದರೆ, ಯಾವುದೇ ಹಣಕಾಸು ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ನಿಮ್ಮ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡೇ ನಿರ್ಧಾರ ಕೈಗೊಳ್ಳುತ್ತೀರಿ. ಮಕ್ಕಳ ಕನಸುಗಳನ್ನು ನನಸಾಗಿಸುವುದು, ಅವರಿಗೆ ಒಳ್ಳೆಯ ಸಂಸ್ಥೆಯಲ್ಲಿ ಶಿಕ್ಷಣ ಕೊಡಿಸುವುದು, ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸುವುದು… ಹೀಗೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗಲೇ ಹೂಡಿಕೆ ಆರಂಭಿಸುತ್ತೀರಿ. ಇಂತಹ ಸಂದರ್ಭದಲ್ಲಿ, ದೀರ್ಘಾವಧಿಯಲ್ಲಿ ದೊಡ್ಡ ಮೊತ್ತ ಕೊಡುವುದಲ್ಲದೆ ಜೀವ ವಿಮೆಯನ್ನೂ ಒದಗಿಸುವಂತಹ ಹೂಡಿಕೆಯ ಯೋಜನೆಗಾಗಿ ಹುಡುಕಾಟ ನಡೆಸುವುದು ಸಹಜ.

ಬಡ್ಡಿ ದರಗಳು ಇಳಿಕೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಹೆಚ್ಚಿನ ಗಳಿಕೆ ತಂದುಕೊಡುವುದರ ಜೊತೆಗೆ ವಿಮೆಯನ್ನೂ ಒದಗಿಸುವ ಹೂಡಿಕೆಯ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತವೂ ಹೌದು. ದೀರ್ಘಕಾಲದವರೆಗೆ ಸತತವಾಗಿ ಹೂಡಿಕೆ ಮಾಡುತ್ತಾ ಹೋದರೆ ಒಳ್ಳೆಯ ಗಳಿಕೆ ತಂದುಕೊಡುವ ಅನೇಕ ಯೋಜನೆಗಳು ಇವೆ. ಆದರೆ, ಇಂತಹ ಹೆಚ್ಚಿನ ಯೋಜನೆಗಳಲ್ಲಿ ‘ತಡೆ ಇಲ್ಲದೆ’ ಸತತವಾಗಿ ಹೂಡಿಕೆ ಮಾಡುತ್ತಿದ್ದರೆ ಮಾತ್ರ ನಿರೀಕ್ಷಿತ ಆದಾಯ ತಂದುಕೊಡುತ್ತವೆ. ಜೀವನ ಯಾವ ಕ್ಷಣದಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದನ್ನು ನಿರೀಕ್ಷಿಸಲು ಯಾರಿಂದಲೂ ಸಾಧ್ಯವಾಗದು. ಆದ್ದರಿಂದ ಎಲ್ಲ ಸಂದರ್ಭಗಳಿಗೂ ಸಿದ್ಧರಾಗಿರುವುದು ಅನಿವಾರ್ಯವಲ್ಲವೇ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆ ಆಧಾರಿತ ಜೀವ ವಿಮೆ ಯೋಜನೆಗಳು (ಯುಲಿಪ್‌) ನೆರವಿಗೆ ಬರುತ್ತವೆ. ಇವು ಹೂಡಿಕೆದಾರರಿಗೆ ಸಂಪತ್ತನ್ನು ವೃದ್ಧಿಸಲು ನೆರವಾಗುವುದರ ಜೊತೆಗೆ ಜೀವವಿಮೆಯ ರಕ್ಷಣೆಯನ್ನೂ ನೀಡುತ್ತವೆ.

ಏನಿದು ಯುಲಿಪ್‌?

ADVERTISEMENT

ಇದು ವಿಮೆ ಸೌಲಭ್ಯ ಒಳಗೊಂಡಂತಹ ಹೂಡಿಕೆ ಮತ್ತು ಉಳಿತಾಯ ಯೋಜನೆ. ಇಲ್ಲಿ ತೊಡಗಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ದೀರ್ಘಾವಧಿಯಲ್ಲಿ ಹೆಚ್ಚಿನ ಗಳಿಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಇದು ಕನಿಷ್ಠ ಗಳಿಕೆಯ ಭರವಸೆಯನ್ನು ನೀಡುವುದರಿಂದ ಹೂಡಿಕೆದಾರರ ಕುಟುಂಬಕ್ಕೆ ಒಂದು ಭದ್ರತೆಯೂ ಲಭಿಸುತ್ತದೆ. ತಮಗೆ ಬೇಕಾದ ಫಂಡ್‌ ಆಯ್ಕೆ ಮಾಡಿಕೊಂಡು, ಅದರಲ್ಲಿ ಹೂಡಿಕೆ ನಡೆಸುವ ಅವಕಾಶ ಇರುವುದಲ್ಲದೆ ‘ಯುಲಿಪ್‌’ನಲ್ಲಿ ಮಾಡಿರುವ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆಯ, 80ಸಿ ಅಡಿ ತೆರಿಗೆ ವಿನಾಯ್ತಿಯೂ ಇರುತ್ತದೆ. ಯೋಜನೆ ಪಕ್ವಗೊಂಡಾಗ ಲಭಿಸುವ ಹಣವೂ ತೆರಿಗೆ ಮುಕ್ತವಾಗಿರುತ್ತದೆ.

ಯುಲಿಪ್‌ ಕೆಲಸ ಮಾಡುವುದು ಹೇಗೆ?

ಯುಲಿಪ್‌ ಹೂಡಿಕೆಯು ದೀರ್ಘಾವಧಿಯದ್ದಾಗಿರುತ್ತದೆ ಎಂಬ ಮುಖ್ಯ ವಿಚಾರವನ್ನು ಹೂಡಿಕೆದಾರರು ನೆನಪಿಟ್ಟುಕೊಳ್ಳಬೇಕು. ಹೂಡಿಕೆದಾರರು ಪಾವತಿಸುವ ಕಂತಿನ ಹಣವನ್ನು ಅವರ ಆಯ್ಕೆಯ ಒಂದು ಅಥವಾ ಹೆಚ್ಚಿನ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಷೇರುಪೇಟೆ ಆಧಾರಿತ ಫಂಡ್‌, ಸಾಲನಿಧಿ ಅಥವಾ ಇವೆರಡರ ಮಿಶ್ರಣ. ಇವುಗಳಲ್ಲಿ ಹೂಡಿಕೆದಾರರು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.

‘ಎಸ್‌ಐಪಿ’ (ಸಿಪ್‌) ಮಾದರಿಯಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವುದರಿಂದ ಷೇರು ಮಾರುಕಟ್ಟೆಯ ಸಂಪೂರ್ಣ ಲಾಭವನ್ನು ಪಡೆಯಲು ‘ಯುಲಿಪ್‌’ನಲ್ಲೂ ಅವಕಾಶ ಇರುತ್ತದೆ. ಅಗತ್ಯವೆನಿಸಿದರೆ ನೀವು ಆಯ್ಕೆ ಮಾಡಿರುವ ಫಂಡ್‌ಗಳನ್ನು ಬದಲಿಸಲೂ ಇಲ್ಲಿ ಅವಕಾಶ ನೀಡಲಾಗುತ್ತದೆ. ಇದನ್ನು ‘ಸ್ವಿಚ್‌’ ಎಂದು ಕರೆಯಲಾಗುತ್ತದೆ. ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ನೀವು ಫಂಡ್‌ ಸ್ವಿಚ್‌ ಮಾಡಿಕೊಳ್ಳಬಹುದು. ಪ್ರತಿ ವರ್ಷವೂ ಕೆಲವು ಉಚಿತ ಸ್ವಿಚ್‌ ಅವಕಾಶಗಳನ್ನು ಹೂಡಿಕೆದಾರರಿಗೆ ನೀಡಲಾಗುತ್ತದೆ. ಅದನ್ನು ಮೀರಿದರೆ ನಂತರದ ಸ್ವಿಚ್‌ಗೆ ಸಣ್ಣ ಪ್ರಮಾಣದ ಶುಲ್ಕ ವಿಧಿಸಲಾಗುತ್ತದೆ. ಹಣದ ತುರ್ತು ಒದಗಿದರೆ ಹೂಡಿಕೆಯ ಭಾಗಶಃ ಹಣವನ್ನು ಹಿಂತೆಗೆದುಕೊಳ್ಳಲು ಸಹ ಇಲ್ಲಿ ಅವಕಾಶ ಇದೆ.

ಕಂತು ಹೆಚ್ಚಿಸಲು ಅವಕಾಶ ಇದೆಯೇ?

ಹೂಡಿಕೆದಾರರ ಬಳಿ ಹೆಚ್ಚಿನ ಹಣ ಇದೆ ಎಂದಾದರೆ, ನಿಗದಿತ ಕಂತಿಗೆ ಹೊರತಾಗಿ ಹೆಚ್ಚುವರಿ ಹಣವನ್ನು ಯುಲಿಪ್‌ನಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ.

ಶುಲ್ಕ ಇದೆಯೇ?

‘ಯುಲಿಪ್‌’ ಹೂಡಿಕೆಗೆ ಕೆಲವು ಶುಲ್ಕಗಳನ್ನು ವಿಧಿಸಲಾಗುತ್ತದೆ. ಪ್ರೀಮಿಯಂ ಹಂಚಿಕೆ ಶುಲ್ಕ, ಆಡಳಿತ ಶುಲ್ಕ, ಫಂಡ್‌ ನಿರ್ವಹಣಾ ಶುಲ್ಕ ಹಾಗೂ ವಿಮೆ ವೆಚ್ಚ ಕುರಿತ ಶುಲ್ಕಗಳನ್ನು ವಿಧಿಸಲಾಗುತ್ತದೆ. ವಿಮೆ ಉತ್ಪನ್ನಗಳು ಯಾವತ್ತೂ ದೀರ್ಘಾವಧಿಯಲ್ಲಿ ಉತ್ತಮ ಲಾಭ ತಂದುಕೊಡುತ್ತವೆ. ಆದ್ದರಿಂದ ಆ ಅವಧಿಗೆ ಹೋಲಿಸಿದರೆ ಈ ಶುಲ್ಕಗಳು ದೊಡ್ಡ ಹೊರೆ ಎನಿಸುವುದಿಲ್ಲ. ಒಂದೆರಡು ಶುಲ್ಕಗಳನ್ನು ಮಾತ್ರ ವಿಧಿಸುವಂಥ ‘ಯುಲಿಪ್’ ಯೋಜನೆಗಳೂ ಈಗ ಲಭ್ಯ ಇವೆ.

ಲಾಕ್‌ ಇನ್‌ ಅವಧಿ: ‘ಯುಲಿಪ್‌’ ಹೂಡಿಕೆಗೆ ಐದು ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ನೀವು ಹೂಡಿಕೆ ಮಾಡಿದ ಹಣವನ್ನು ಮೊದಲ ಐದು ವರ್ಷಗಳ ಅವಧಿಯಲ್ಲಿ ಹಿಂದೆಪಡೆಯುವಂತಿಲ್ಲ. ಆ ನಂತರ ಯಾವುದೇ ದಂಡ ಶುಲ್ಕ ಇಲ್ಲದೆ ಹಣವನ್ನು ಯಾವಾಗ ಬೇಕಾದರೂ ವಾಪಸ್‌ ಪಡೆಯಬಹುದು.

ಯಾರಿಗೆ ಯುಲಿಪ್‌ ಸೂಕ್ತ?

ದೀರ್ಘಾವಧಿಯಲ್ಲಿ ದೊಡ್ಡ ಮೊತ್ತ ಪಡೆಯಲು ಬಯಸುವವರು ಖಂಡಿತವಾಗಿ ‘ಯುಲಿಪ್‌’ ಆಯ್ಕೆ ಮಾಡಿಕೊಳ್ಳಬಹುದು. ಯೋಜನೆ ಕುರಿತು ಸಂಪೂರ್ಣ ಮಾಹಿತಿ ಪಡೆದು ಹೂಡಿಕೆ ಆರಂಭಿಸಬೇಕು. 18ವರ್ಷ ವಯಸ್ಸು ಮೀರಿದ ಯಾರು ಬೇಕಾದರೂ ಹೂಡಿಕೆ ಆರಂಭಿಸಬಹುದು. ಮಾರುಕಟ್ಟೆ ಆಧಾರಿತ ಯೋಜನೆಯಿಂದ ಲಾಭ ಪಡೆಯುವ ಇಚ್ಛೆ ಇದ್ದರೆ ಖಂಡಿತವಾಗಿಯೂ ‘ಯುಲಿಪ್‌’ನಲ್ಲಿ ಹೂಡಿಕೆ ಆರಂಭಿಸಿ.

(ಲೇಖಕ: ’ಎಚ್‌ಡಿಎಫ್‌ಸಿ ಲೈಫ್‌’ನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.