ನವದೆಹಲಿ: ಎಲ್‌ಪಿಜಿ ವಿತರಕರ ಸೇವೆ ಚೆನ್ನಾಗಿ ಇಲ್ಲದಿದ್ದರೆ, ಎಲ್‌ಪಿಜಿ ಸಂಪರ್ಕವನ್ನು ಹಾಗೆಯೇ ಉಳಿಸಿಕೊಂಡು ವಿತರಕರನ್ನು ಮತ್ತು ಕಂಪನಿಯನ್ನು ಬದಲಾಯಿಸುವ ಅವಕಾಶವು ಗ್ರಾಹಕರಿಗೆ ಸದ್ಯದಲ್ಲೇ ಸಿಗುವ ಸಾಧ್ಯತೆ ಇದೆ.
ತೈಲೋತ್ಪನ್ನಗಳ ನಿಯಂತ್ರಣ ಸಂಸ್ಥೆಯಾದ ‘ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ’ಯು (ಪಿಎನ್‌ಜಿಆರ್‌ಬಿ) ಇಂಥದ್ದೊಂದು ಅವಕಾಶ ಕಲ್ಪಿಸುವ ಚಿಂತನೆ ನಡೆಸಿದೆ. ಈ ಬಗ್ಗೆ ಸಲಹೆ ನೀಡುವಂತೆ ಅದು ಗ್ರಾಹಕರು ಹಾಗೂ ಸಂಬಂಧಪಟ್ಟ ಇತರರಿಗೆ ಸೂಚಿಸಿದೆ.
2013ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಎಲ್‌ಪಿಜಿ ಸಂಪರ್ಕವನ್ನು ಬದಲಾಯಿಸಿಕೊಳ್ಳುವ ಪ್ರಾಯೋಗಿಕ ಯೋಜನೆಯೊಂದನ್ನು 24 ಜಿಲ್ಲೆಗಳಲ್ಲಿ ಆರಂಭಿಸಿತ್ತು. ಇದನ್ನು 2014ರಲ್ಲಿ ದೇಶದಾದ್ಯಂತ 480 ಜಿಲ್ಲೆಗಳಿಗೆ ವಿಸ್ತರಿಸಲಾಯಿತು.
ಆದರೆ, ಆಗ ಜಾರಿಗೆ ತಂದ ಯೋಜನೆಯಲ್ಲಿ ಗ್ರಾಹಕರಿಗೆ ತಮ್ಮ ಎಲ್‌ಪಿಜಿ ವಿತರಕರನ್ನು ಮಾತ್ರ ಬದಲಾಯಿಸುವ ಅವಕಾಶ ಇತ್ತು. ಎಲ್‌ಪಿಜಿ ಸೇವೆ ಒದಗಿಸುವ ಕಂಪನಿಯನ್ನು ಬದಲಾಯಿಸಲು ಅವಕಾಶ ಇರಲಿಲ್ಲ.
ಅಂದರೆ, ಇಂಡೇನ್ ಗ್ಯಾಸ್‌ನ ಗ್ರಾಹಕರು ಇಂಡೇನ್ ಗ್ಯಾಸ್‌ನ ವಿತರಕರನ್ನು ಬದಲಾಯಿಸಬಹುದಿತ್ತು. ಆದರೆ ಅವರಿಗೆ ಸಂಪರ್ಕವನ್ನು ಹಾಗೆಯೇ ಉಳಿಸಿಕೊಂಡು ಭಾರತ್ ಗ್ಯಾಸ್ ಅಥವಾ ಎಚ್‌ಪಿ ಗ್ಯಾಸ್ ಎಲ್‌ಪಿಜಿ ಸೇವೆಗೆ ಬದಲಾಗಲು ಅವಕಾಶ ಇರಲಿಲ್ಲ.
ಈಗ ಗ್ರಾಹಕರಿಗೆ ಎಲ್‌ಪಿಜಿ ಸೇವೆ ಒದಗಿಸುವ ಕಂಪನಿಯನ್ನೂ ಬದಲಾಯಿಸುವ ಅವಕಾಶ ಕಲ್ಪಿಸಬೇಕು ಎಂಬ ಚಿಂತನೆ ಪಿಎನ್‌ಜಿಆರ್‌ಬಿ ಅಧಿಕಾರಿಗಳಲ್ಲಿ ಇದೆ. ‘ಇದಕ್ಕಾಗಿ ಗ್ರಾಹಕರು, ಇತರ ಪಾಲುದಾರರು ಮತ್ತು ವಿತರಕರಿಂದ ಸಲಹೆ ಆಹ್ವಾನಿಸಲಾಗಿದೆ’ ಎಂದು ಪಿಎನ್‌ಜಿಆರ್‌ಬಿ ಹೇಳಿದೆ.
ಸಲಹೆಗಳನ್ನು ಅಕ್ಟೋಬರ್ ಮಧ್ಯಭಾಗಕ್ಕೆ ಮೊದಲು ಸಲ್ಲಿಸಬೇಕಿದೆ. ಇವು ಬಂದ ನಂತರದಲ್ಲಿ ಅಗತ್ಯ ನಿಯಮಗಳನ್ನು, ಮಾರ್ಗಸೂಚಿಗಳನ್ನು ಪಿಎನ್‌ಜಿಆರ್‌ಬಿ ರೂಪಿಸಲಿದೆ. ಈ ಸೌಲಭ್ಯದ ಜಾರಿಗೆ ದಿನಾಂಕವನ್ನು ಕೂಡ ಗೊತ್ತುಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.