ADVERTISEMENT

ಬರಲಿವೆ 5 ಎಲೆಕ್ಟ್ರಿಕ್‌ ಎಸ್‌ಯುವಿ: ಮಹೀಂದ್ರ

ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ ಮಹೀಂದ್ರ ಮಾಹಿತಿ

ಪಿಟಿಐ
Published 15 ಆಗಸ್ಟ್ 2022, 21:38 IST
Last Updated 15 ಆಗಸ್ಟ್ 2022, 21:38 IST
ಎಕ್ಸ್‌ಯುವಿ.ಇ9
ಎಕ್ಸ್‌ಯುವಿ.ಇ9   

ಲಂಡನ್‌: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಐದು ಎಲೆಕ್ಟ್ರಿಕ್‌ ಎಸ್‌ಯುವಿ ಬಿಡುಗಡೆ ಮಾಡುವುದಾಗಿ ಸೋಮವಾರ ತಿಳಿಸಿದೆ.

ಬ್ಯಾನ್‌ಬರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯು ಈ ಐದು ಇ–ಎಸ್‌ಯುವಿಗಳನ್ನು ಅನಾವರಣಗೊಳಿಸಿತು. ಮೊದಲ ನಾಲ್ಕು ಇ–ಎಸ್‌ಯುವಿಗಳು 2024ರಿಂದ 2026ರ ಒಳಗಾಗಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಮಾಡಲಾಗಿದೆ.

‘ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಹಾಗೂ ಸರ್ಕಾರದ ಬೆಂಬಲ ಹೆಚ್ಚಾಗುತ್ತಿದೆ. ಹೀಗಾಗಿ ವಿದ್ಯುತ್ ಚಾಲಿತ ಪ್ರಯಾಣಿಕ ವಾಹನ ವಿಭಾಗವನ್ನು ಪ್ರವೇಶಿಸಲು ಇದು ಸೂಕ್ತ ಸಮಯ’ ಎಂದು ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ ಮಹೀಂದ್ರ ಹೇಳಿದ್ದಾರೆ.

ಕಂಪನಿಯ ಜಾಗತಿಕ ಮಹತ್ವಾಕಾಂಕ್ಷೆಗಳಿಗೆ ಸಂಬಂಧಿಸಿದಂತೆ ಈ ಐದು ಎಲೆಕ್ಟ್ರಿಕ್‌ ಎಸ್‌ಯುವಿಗಳು ಮಹತ್ವದ್ದಾಗಿವೆ ಎಂದುಆನಂದ್‌ಮಹೀಂದ್ರಹೇಳಿದ್ದಾರೆ.

ADVERTISEMENT

ಎಕ್ಸ್‌ಯುವಿ ಹಾಗೂ ಆಲ್‌-ನ್ಯೂ ಎಲೆಕ್ಟ್ರಿಕ್‌-ಓನ್ಲಿ ಬ್ರ್ಯಾಂಡ್‌ ‘ಬಿ’ ಅಡಿಯಲ್ಲಿ ಐದು ಎಲೆಕ್ಟ್ರಿಕ್‌ ಎಸ್‌ಯುವಿ ಮಾದರಿಗಳನ್ನು ಪರಿಚಯಿಸಲಾಗುವುದು ಎಂದು ಕಂಪನಿ ತಿಳಿಸಿದೆ.

2027ರ ಹೊತ್ತಿಗೆ ನಾವು ಮಾರಾಟ ಮಾಡುವ ಎಸ್‌ಯುವಿಗಳ ನಾಲ್ಕರಲ್ಲಿ ಒಂದು ಭಾಗವು ಎಲೆಕ್ಟ್ರಿಕ್‌ ಆಗಿರುವ ನಿರೀಕ್ಷೆ ಇದೆ ಎಂದು ಮಹೀಂದ್ರ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಅನಿಶ್‌ ಶಾ ಹೇಳಿದ್ದಾರೆ.

ಸಮೂಹವು 2021–22ರಲ್ಲಿ ದೇಶದಲ್ಲಿ 2.25 ಲಕ್ಷ ಎಸ್‌ಯುವಿ ಮಾರಾಟ ಮಾಡಿದೆ.

ಸಮೂಹದ ವಿದ್ಯುತ್ ಚಾಲಿತ ವಾಹನ (ಇ.ವಿ.) ಕಂಪನಿಯಲ್ಲಿ ₹ 1,925 ಕೋಟಿ ಹೂಡಿಕೆ ಮಾಡುವುದಾಗಿ ಬ್ರಿಟೀಷ್‌ ಇಂಟರ್‌ನ್ಯಾಷನಲ್‌ ಇನ್‌ವೆಸ್ಟ್‌ಮೆಂಟ್‌ (ಬಿಐಐ) ಈಗಾಗಲೇ ತಿಳಿಸಿದೆ.

ಇವಿ ಉತ್ಪನ್ನಗಳ ವಿನ್ಯಾಸ ಕೇಂದ್ರ ‘ಮಹೀಂದ್ರ ಅಡ್ವಾನ್ಸ್ಡ್‌ ಡಿಸೈನ್‌ ಯುರೋಪ್‌’ (ಎಂ.ಎ.ಡಿ.ಇ) ಅನ್ನು ಸೋಮವಾರ ಉದ್ಘಾಟಿಸಲಾಯಿತು.

ಎರಡೂ ಸಂಸ್ಥೆಗಳ ನಡುವಿನ ಒಪ್ಪಂದದ ಪ್ರಕಾರ, ಇ.ವಿ. ವಾಹನಗಳನ್ನು ತಯಾರಿಸುವ ಹೊಸ ಕಂಪನಿಯಲ್ಲಿ 2024ರಿಂದ 2027ರ ನಡುವೆ ಒಟ್ಟು ₹ 8 ಸಾವಿರ ಕೋಟಿ ಹೂಡಿಕೆ ಆಗಲಿದೆ.

ಮಹೀಂದ್ರ–ಫೋಕ್ಸ್‌ವ್ಯಾಗನ್‌ ಒಪ್ಪಂದ: ವಿದ್ಯುತ್ ಚಾಲಿತ ವಾಹನ ವಿಭಾಗದಲ್ಲಿ ಸಹಕಾರವನ್ನು ಬಲಪಡಿಸಲು ಮಹೀಂದ್ರ ಸಮೂಹ ಮತ್ತು ಫೋಕ್ಸ್‌ವ್ಯಾಗನ್‌ ಒಪ್ಪಂದ ಮಾಡಿಕೊಂಡಿವೆ.

ಮುಖ್ಯಾಂಶಗಳು
* 2024ರ ಅಂತ್ಯದ ವೇಳೆಗೆ ಭಾರತದಲ್ಲಿ ಮೊದಲ ಎಲೆಕ್ಟ್ರಿಕ್‌ ಎಸ್‌ಯುವಿ
* ಇವಿ ಬಳಕೆ ಬಗ್ಗೆ ಗ್ರಾಹಕರಲ್ಲಿ ಹೆಚ್ಚಿದ ಅರಿವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.