ADVERTISEMENT

ಮಲೆನಾಡು ಉತ್ಪನ್ನಗಳ ಮೌಲ್ಯವರ್ಧಿಸಿದ ‘ರಾ ಗ್ರಾನ್ಯುಲ್ಸ್’

ಚಂದ್ರಹಾಸ ಹಿರೇಮಳಲಿ
Published 19 ಅಕ್ಟೋಬರ್ 2021, 19:07 IST
Last Updated 19 ಅಕ್ಟೋಬರ್ 2021, 19:07 IST
ರಾ ಗ್ರಾನ್ಯುಲ್ಸ್ ಉತ್ಪನ್ನಗಳು
ರಾ ಗ್ರಾನ್ಯುಲ್ಸ್ ಉತ್ಪನ್ನಗಳು   

ಶಿವಮೊಗ್ಗ: ಲಾಕ್‌ಡೌನ್ ಸಮಯದಲ್ಲಿ ಊರಿಗೆ ಮರಳಿದ ಸಾಫ್ಟ್‌ವೇರ್ ಎಂಜಿನಿಯರೊಬ್ಬರು ಬಿಡುವಿನ ಸಮಯದಲ್ಲಿ ಮಲೆನಾಡಿನ ಉತ್ಪನ್ನಗಳನ್ನು ಸ್ನೇಹಿತರಿಗೆ, ಸಂಬಂಧಿಕರಿಗೆ ತಲುಪಿಸಲು ಹುಟ್ಟುಹಾಕಿದ ‘ರಾ ಗ್ರಾನ್ಯುಲ್ಸ್‌’ ಸಂಸ್ಥೆ ಒಂದೇ ವರ್ಷದ ಅವಧಿಯಲ್ಲಿಜನಮನ್ನಣೆ ಗಳಿಸಿದೆ.

ಸಾಗರ ತಾಲ್ಲೂಕಿನ ಹಂಸಗಾರುವಿನ ಎಚ್‌.ಎಸ್‌. ಕಾರ್ತಿಕ್‌ ಬೆಂಗಳೂರಿನಲ್ಲಿ 12 ವರ್ಷಗಳಿಂದ ಖಾಸಗಿ ಕಂಪನಿಯೊಂದರಲ್ಲಿ ದುಡಿಯುತ್ತಿದ್ದಾರೆ. 2020ರ ಮಾರ್ಚ್‌ ನಂತರ ಲಾಕ್‌ಡೌನ್ ಕಾರಣದಿಂದಾಗಿ ಊರಿನಿಂದಲೇ ಕಂಪನಿ ಕೆಲಸ ಮಾಡುತ್ತಾರೆ. ಆಗ ಕರೆಕೈ, ತಲವಾಟದ ಕೆ.ಜಿ. ಪ್ರಶಾಂತ್ ಪರಿಚಯವಾಯಿತು. ಮಲೆನಾಡಿನಲ್ಲಿ ಸಿಗುವ ನೈಸರ್ಗಿಕ ಜೇನುತುಪ್ಪ ಸಂಗ್ರಹಿಸಿ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದ ಅವರ ಬಳಿ ಚರ್ಚಿಸಿದಾಗ ಮಲೆನಾಡಿನ ಎಷ್ಟೋ ಉತ್ಪನ್ನಗಳು ವ್ಯರ್ಥವಾಗುತ್ತಿರುವ ವಿಷಯ ತಿಳಿಯಿತು. ಮಲೆನಾಡಿನ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರಕಿಸಲು ಇಬ್ಬರೂ ಸೇರಿ ಹೊಸ ಸಂಸ್ಥೆ ಹುಟ್ಟುಹಾಕಿದ್ದಾರೆ.

ಶರಾವತಿ ಕಣಿವೆ ಪ್ರದೇಶಗಳಲ್ಲಿ ಸಿಗುವ ನೈಸರ್ಗಿಕ ಜೇನು, ಕೋಕಂ, ನೆಲ್ಲಿಕಾಯಿ, ನೇರಳೆ, ನನ್ನಾರಿ, ಒಂದೆಲಗದ ಆರೋಗ್ಯ ವರ್ಧಕ ಪೇಯಗಳು ಹಾಗೂ ಹಶಿಡಿ ಕೆಂಪು ಅಕ್ಕಿಯನ್ನು ರಾ ಗ್ರಾನ್ಯುಲ್ಸ್‌ ಹೆಸರಲ್ಲಿ ಪ್ಯಾಕ್‌ ಮಾಡಿ ಜನರಿಗೆ ತಲುಪಿಸಲು ಆರಂಭಿಸಿದರು. ಮೂರು ಉತ್ಪನ್ನಗಳಿಂದ ಆರಂಭವಾದ ವ್ಯವಹಾರ ಇಂದು 30 ಉತ್ಪನ್ನಗಳಿಗೆ ತಲುಪಿದೆ. ಲವಂಗ, ಕಾಳು ಮೆಣಸು, ಅರಿಶಿನ, ಸೂಜಿ ಮೆಣಸು, ಜಾಯಿಪತ್ರೆ, ಅಂಜೂರ ಲೇಹ್ಯ, ಸುಂಗಂಧ ಬೇರುಗಳು, ಜೋನಿಬೆಲ್ಲ, ಅಪ್ಪೆಮಿಡಿ ಉಪ್ಪಿನ ಕಾಯಿ ಮಾರಾಟ ಮಾಡುತ್ತಿದ್ದಾರೆ.

ADVERTISEMENT

‘ಕಂಪನಿಗೆ ರೂಪುರೇಷೆ ನೀಡಲು ಎಂಟು ತಿಂಗಳು ಸಮಯ ತೆಗೆದುಕೊಂಡೆವು. ₹ 6 ಲಕ್ಷ ಬಂಡವಾಳದಲ್ಲಿ ಆರಂಭಿಸಿದ ಕಂಪನಿಯ ಉತ್ಪನ್ನಗಳಿಗೆ ಈಗ ಬೆಂಗಳೂರು, ಮೈಸೂರು ಸೇರಿ ಹಲವು ಜಿಲ್ಲೆಗಳಿಂದ ಬೇಡಿಕೆ ಬರುತ್ತಿದೆ. ರೊಟ್ಟಿ, ಚಪಾತಿಗಳಂತೆ ಬಳಸಬಹುದಾದ ಬಾಳೆಕಾಯಿ ಪುಡಿಯ ಉತ್ಪನ್ನ ಬಾಕಾಹು, ಬಾಳೆ ಹಣ್ಣಿನ ಸುಖೇಲಿ, ಇದ್ದಿಲಿನ ಸೋಪಿಗೆ ಭಾರಿ ಬೇಡಿಕೆ ಇದೆ. ಪ್ಯಾಕೇಜ್, ಕೊರಿಯರ್‌ಗೆ ಹೆಚ್ಚು ವೆಚ್ಚವಾಗುತ್ತಿದೆ. ಸಾಗರ ಸಮೀಪದ ತಾಳಗುಪ್ಪದಲ್ಲಿ ಮಳಿಗೆ ತೆರೆದಿದ್ದೇವೆ. ವ್ಯವಹಾರ ಹೆಚ್ಚಿದಷ್ಟು ಅದರ ಲಾಭ ಗ್ರಾಹಕರಿಗೆ ವರ್ಗಾಯಿಸುವ ಚಿಂತನೆ ಇದೆ’ ಎನ್ನುತ್ತಾರೆ ಕಾರ್ತಿಕ್ ಮತ್ತು
ಪ್ರಶಾಂತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.