ADVERTISEMENT

ತಯಾರಿಕಾ ಚಟುವಟಿಕೆ ಸೆಪ್ಟೆಂಬರ್‌ನಲ್ಲಿ ಅಲ್ಪ ಇಳಿಕೆ

ಸತತ 15ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಬೆಳವಣಿಗೆ

ಪಿಟಿಐ
Published 3 ಅಕ್ಟೋಬರ್ 2022, 11:42 IST
Last Updated 3 ಅಕ್ಟೋಬರ್ 2022, 11:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ತಯಾರಿಕಾ ಚಟುವಟಿಕೆಯು ಸೆಪ್ಟೆಂಬರ್‌ನಲ್ಲಿ ಅಲ್ಪ ಇಳಿಕೆ ಕಂಡಿದೆ. ಹೀಗಿದ್ದರೂ ಸತತ 15ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಹಾದಿಯಲ್ಲಿಯೇ ಇದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಆಗಸ್ಟ್‌ನಲ್ಲಿ 56.2ರಷ್ಟು ಇತ್ತು. ಇದು ಸೆಪ್ಟೆಂಬರ್‌ನಲ್ಲಿ 55.1ಕ್ಕೆ ಇಳಿಕೆ ಆಗಿದೆ. ಕಂಪನಿಗಳು ಹೆಚ್ಚಿನ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದು, ಬೆಲೆ ಏರಿಕೆಯ ಒತ್ತಡ ಕಡಿಮೆ ಆಗುತ್ತಿದೆ ಎಂದು ಅದು ತಿಳಿಸಿದೆ.

ಆಗಸ್ಟ್‌ನಲ್ಲಿ ಸೂಚ್ಯಂಕವು ತುಸು ಇಳಿಕೆ ಕಂಡಿದ್ದರೂ ಬೆಳವಣಿಗೆ ದರವು ಐತಿಹಾಸಿಕ ಗರಿಷ್ಠ ಮಟ್ಟದಲ್ಲಿಯೇ ಇದೆ. ತಯಾರಿಕೆ ಹೆಚ್ಚಿಸಲು ಮತ್ತು ಮಾರಾಟದಲ್ಲಿ ಉತ್ತಮ ಪ್ರಗತಿ ಸಾಧಿಸಲು ಕಂಪನಿಗಳು ಹೆಚ್ಚುವರಿ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಿವೆ. ಬೆಲೆ ಏರಿಕೆ ಒತ್ತಡ ಕಡಿಮೆ ಆಗಿರುವುದರಿಂದ ಖರೀದಿಯು ಮತ್ತೆ ಏರಿಕೆ ಆಗುತ್ತಿದೆ ಎಂದು ವಿವರಿಸಿದೆ.

ADVERTISEMENT

ಜಾಗತಿಕ ಅಡಚಣೆಗಳು ಮತ್ತು ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ದೇಶದ ತಯಾರಿಕಾ ವಲಯವು ಉತ್ತಮ ಸ್ಥಿತಿಯಲ್ಲಿ ಇದೆ ಎನ್ನುವುದನ್ನು ಪಿಎಂಐ ಅಂಕಿ–ಅಂಶವು ಸೂಚಿಸುತ್ತಿದೆ ಎಂದು ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ತಯಾರಿಕಾ ವೆಚ್ಚವು ಎರಡು ವರ್ಷಗಳಲ್ಲಿಯೇ ಅತ್ಯಂತ ನಿಧಾನಗತಿಯ ಏರಿಕೆ ಕಂಡಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.