ADVERTISEMENT

5ನೇ ದಿನವೂ ಷೇರುಪೇಟೆಗೆ ನಷ್ಟ

ಅಮೆರಿಕ–ಚೀನಾ ವಾಣಿಜ್ಯ ಸಮರದ ಆತಂಕ

ಪಿಟಿಐ
Published 7 ಮೇ 2019, 19:14 IST
Last Updated 7 ಮೇ 2019, 19:14 IST

ಮುಂಬೈ: ದೇಶದ ಷೇರುಪೇಟೆಗಳ ಮೇಲೆಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಂಘರ್ಷದ ನಕಾರಾತ್ಮಕ ಪ್ರಭಾವ ಮುಂದುವರಿದಿದೆ.

ಸತತ ಐದನೇ ವಹಿವಾಟು ಅವಧಿಯಲ್ಲಿಯೂ ಸೂಚ್ಯಂಕಗಳು ಇಳಿಕೆ ಕಂಡಿವೆ. ಮೂರು ತಿಂಗಳ ಕನಿಷ್ಠ ಮಟ್ಟದಲ್ಲಿ ಮಂಗಳವಾರದ ವಹಿವಾಟು ಅಂತ್ಯಗೊಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 324 ಅಂಶ ಇಳಿಕೆಯಾಗಿ 38,276 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಮಧ್ಯಂತರ ವಹಿವಾಟಿನಲ್ಲಿ 600 ಅಂಶಗಳಷ್ಟು ಏರಿಳಿತ ಕಂಡಿತು. 38,835 ಅಂಶಗಳ ಗರಿಷ್ಠ ಮತ್ತು 38,236 ಅಂಶಗಳ ಕನಿಷ್ಠ ಮಟ್ಟವನ್ನು ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 100 ಅಂಶ ಇಳಿಕೆ ಕಂಡು 11,498 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಎರಡೂ ಸೂಚ್ಯಂಕಗಳು ಫೆಬ್ರುವರಿ 19ರ ನಂತರ ಕನಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯ ಕಂಡಿವೆ.

‘ಭಾರತದ ಷೇರುಪೇಟೆಗಳಲ್ಲಿನ ವಹಿವಾಟು ಕೆಲವು ದಿನಗಳಿಂದ ಬಹಳಷ್ಟು ಚಂಚಲವಾಗಿದೆ. ಅಮೆರಿಕ–ಚೀನಾ ವಾಣಿಜ್ಯ ಸಂಘರ್ಷ, ಕೆಲವು ಕಂಪನಿಗಳತ್ರೈಮಾಸಿಕ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದು ಸಹ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ’ ಎಂದು ಸೆಂಟ್ರಂ ಬ್ರೋಕಿಂಗ್‌ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಜಗನ್ನಾಥಂ ಟಿ. ಅವರು ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾದ ಷೇರುಪೇಟೆಗಳು ಚೇತರಿಕೆ ಹಾದಿಗೆ ಮರಳಿವೆ. ಶಾಂಘೈ ಕಾಂಪೊಸಿಟ್‌ ಸೂಚ್ಯಂಕ ಏರುಮುಖವಾಗಿ ವಹಿವಾಟು ಅಂತ್ಯಗೊಳಿಸಿದೆ.

ಕರಗಿದ ಹೂಡಿಕೆದಾರರ ಸಂಪತ್ತು

ಎರಡು ದಿನಗಳ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 2.5 ಲಕ್ಷ ಕೋಟಿಗಳಷ್ಟು ಕರಗಿದೆ.

ಸೋಮವಾರದ ವಹಿವಾಟಿನಲ್ಲಿ ₹ 1.24 ಲಕ್ಷ ಕೋಟಿ ಮತ್ತು ಮಂಗಳವಾರದ ವಹಿವಾಟಿನಲ್ಲಿ ₹ 1.26 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದಷೇರುಪೇಟೆಯ ಬಂಡವಾಳ ಮೌಲ್ಯ ₹ 151.61 ಲಕ್ಷ ಕೋಟಿಗಳಿಂದ ₹ 149.11 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು ಒಂದು ಡಾಲರ್‌ಗೆ ₹ 69.43 ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.