ADVERTISEMENT

ಹಿಗ್ಗಿದ ರಿಯಲ್‌ ಎಸ್ಟೇಟ್‌ ವಲಯ: ಸಿಐಐ–ನೈಟ್‌ ಫ್ರ್ಯಾಂಕ್ ವರದಿ

ಪಿಟಿಐ
Published 13 ಏಪ್ರಿಲ್ 2024, 14:44 IST
Last Updated 13 ಏಪ್ರಿಲ್ 2024, 14:44 IST
........
........   

ನವದೆಹಲಿ: ದೇಶದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ಭಾರತದ ರಿಯಲ್‌ ಎಸ್ಟೇಟ್‌ ವಲಯದ ಮಾರುಕಟ್ಟೆ ಗಾತ್ರವು ಶೇ 73ರಷ್ಟು ಹಿಗ್ಗಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹಾಗೂ ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್ ಇಂಡಿಯಾ ವರದಿ ಹೇಳಿದೆ.

2015ರಲ್ಲಿ ವಸತಿ, ವಾಣಿಜ್ಯ ಆಸ್ತಿ ವಿಭಾಗದಲ್ಲಿನ ನಿರ್ಮಾಣ ಮತ್ತು ಸೇವಾ ಮೊತ್ತವು ₹26.11 ಲಕ್ಷ ಕೋಟಿ ಇತ್ತು. ಈಗ ₹40.30 ಲಕ್ಷ ಕೋಟಿಗೆ ಮುಟ್ಟಿದೆ. ಮಾರುಕಟ್ಟೆ ಗಾತ್ರವು ಸಾಕಷ್ಟು ವಿಸ್ತರಿಸಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಶೇ 7.3ರಷ್ಟು ಕೊಡುಗೆ ನೀಡುತ್ತಿದೆ ಎಂದು ಹೇಳಿದೆ.

2034ರ ವೇಳೆಗೆ ದೇಶದ ರಿಯಲ್‌ ಎಸ್ಟೇಟ್‌ ವಲಯದ ಮಾರುಕಟ್ಟೆ ಮೌಲ್ಯವು ₹122 ಲಕ್ಷ ಕೋಟಿಗೆ (1.48 ಟ್ರಿಲಿಯನ್‌ ಡಾಲರ್‌) ತಲುಪಲಿದೆ ಎಂದು ವರದಿಯು ಅಂದಾಜಿಸಿದೆ.

ADVERTISEMENT

ಈ ವಲಯವು 250ಕ್ಕೂ ಹೆಚ್ಚು ಪೂರಕ ಕೈಗಾರಿಕೆಗಳೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಪರ್ಕ ಬೆಸೆದುಕೊಂಡಿದೆ. ಕೃಷಿ ವಲಯದ ಬಳಿಕ ಅತಿಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುವ ವಲಯವೂ ಇದಾಗಿದೆ. ದೇಶದ ಒಟ್ಟು ಉದ್ಯೋಗಗಳಲ್ಲಿ ಈ ವಲಯದ ಪಾಲು ಶೇ 18ರಷ್ಟಿದೆ ಎಂದು ವಿವರಿಸಿದೆ.

ಮನೆಗಳು ಮತ್ತು ಕಚೇರಿ ಸ್ಥಳಕ್ಕೆ ಬೇಡಿಕೆ ಹೆಚ್ಚಿದೆ. ಆತಿಥ್ಯ ಹಾಗೂ ರಿಟೇಲ್‌ ವಲಯದ ವಿಸ್ತರಣೆಯಿಂದಾಗಿ ಮಾರುಕಟ್ಟೆ ಗಾತ್ರವು ಹೆಚ್ಚಳವಾಗಿದೆ ಎಂದು ತಿಳಿಸಿದೆ.

2034ರ ವೇಳೆಗೆ ವಸತಿ ಮಾರುಕಟ್ಟೆಯ ಮೌಲ್ಯವು ₹75.75 ಲಕ್ಷ ಕೋಟಿ ಮುಟ್ಟುವ ನಿರೀಕ್ಷೆಯಿದೆ. ಕಚೇರಿ ವಲಯದ ಮೌಲ್ಯವು ₹10.45 ಲಕ್ಷ ಕೋಟಿಯಷ್ಟು ಕೊಡುಗೆ ನೀಡುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ. 

‘ಮುಂದಿನ ದಶಕಗಳಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗೂ ಮೀರಿ ಬೆಳೆಯಲಿದೆ. ಆರ್ಥಿಕತೆಯ ಈ ಚಾಲಕ ಶಕ್ತಿಗೆ ರಿಯಲ್ ಎಸ್ಟೇಟ್ ಕ್ಷೇತ್ರವು ಮೂಲಾಧಾರವಾಗಲಿದೆ’ ಎಂದು ನೈಟ್‌ ಫ್ರ್ಯಾಂಕ್ ಇಂಡಿಯಾದ ಹಿರಿಯ ಕಾರ್ಯ ನಿರ್ವಾಹಕ (ಸಂಶೋಧನೆ, ಸಲಹೆ, ಮೂಲ ಸೌಕರ್ಯ ಮತ್ತು ಮೌಲ್ಯ ವಿಭಾಗ) ಗುಲಾಮ್ ಜಿಯಾ ಹೇಳಿದ್ದಾರೆ.

‘ಮೇಕ್‌ ಇನ್‌ ಇಂಡಿಯಾ’ ಕಾರ್ಯತಂತ್ರ, ಮನೆ ಖರೀದಿಗೆ ಗ್ರಾಹಕರು ಮಾಡುವ ವೆಚ್ಚವು ಭಾರತದ ಆರ್ಥಿಕತೆ ಮೌಲ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.