ADVERTISEMENT

ಬ್ಯಾಂಕ್‌ ಷೇರುಗಳ ಗಳಿಕೆ; ಸೆನ್ಸೆಕ್ಸ್‌ 280 ಅಂಶ ಏರಿಕೆ

ಪಿಟಿಐ
Published 23 ಮಾರ್ಚ್ 2021, 15:33 IST
Last Updated 23 ಮಾರ್ಚ್ 2021, 15:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಹಿಂದಿನ ವರ್ಷ ಸಾಲದ ಕಂತುಗಳ ಮರುಪಾವತಿಗೆ ನೀಡಿದ್ದ ಆರು ತಿಂಗಳ ವಿನಾಯಿತಿ ಅವಧಿಗೆ ಸಾಲಗಾರರಿಗೆ ಚಕ್ರಬಡ್ಡಿ ಅಥವಾ ಬಡ್ಡಿಗೆ ದಂಡ ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು ಮಂಗಳವಾರ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು.

ಬ್ಯಾಂಕಿಂಗ್‌ ವಲಯದ ಷೇರುಗಳು ಗಳಿಕೆ ಕಂಡಿದ್ದರಿಂದ ಷೇರುಪೇಟೆ ಸೂಚ್ಯಂಕಗಳೂ ಏರಿಕೆ ಕಂಡವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 280 ಅಂಶ ಹೆಚ್ಚಾಗಿ 50,051 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 78 ಅಂಶ ಹೆಚ್ಚಾಗಿ 14,815 ಅಂಶಗಳಿಗೆ ತಲುಪಿತು.

ಜಾಗತಿಕ ಷೇರುಪೇಟೆಗಳ ವಹಿವಾಟು ಇಳಿಮುಖವಾಗಿದ್ದರೂ, ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಬ್ಯಾಂಕಿಂಗ್ ಷೇರುಗಳು ಉತ್ತಮ ಗಳಿಕೆ ಕಂಡಿದ್ದರಿಂದ ದೇಶಿ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ADVERTISEMENT

ಅಲ್ಟ್ರಾಟೆಕ್‌ ಸಿಮೆಂಟ್‌ ಷೇರು ಶೇಕಡ 3.06ರಷ್ಟು ಗರಿಷ್ಠ ಗಳಿಕೆ ಕಂಡಿತು. ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಟೈಟಾನ್‌, ಎಕ್ಸಿಸ್‌ ಬ್ಯಾಂಕ್, ಎಸ್‌ಬಿಐ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಬೆಲೆಯೂ ಹೆಚ್ಚಾಯಿತು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 6 ಪೈಸೆ ಕಡಿಮೆಯಾಗಿ ಒಂದು ಡಾಲರ್‌ಗೆ ₹ 72.43ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.