ADVERTISEMENT

ಜಾಗತಿಕ ವಹಿವಾಟು ಚೇತರಿಕೆ: ಸೆನ್ಸೆಕ್ಸ್‌ 1,534 ಅಂಶ ಜಿಗಿತ

ಪಿಟಿಐ
Published 20 ಮೇ 2022, 13:57 IST
Last Updated 20 ಮೇ 2022, 13:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ದೇಶದ ಷೇರುಪೇಟೆಗಳು ಶುಕ್ರವಾರ ಸಕಾರಾತ್ಮಕ ಹಾದಿಗೆ ಮರಳಿ ವಹಿವಾಟು ಅಂತ್ಯಗೊಳಿಸಿದವು. ಜಾಗತಿಕ ಮಾರುಕಟ್ಟೆಗಳಲ್ಲಿ ವಹಿವಾಟು ಚೇತರಿಕೆ ಕಂಡಿದ್ದು, ದೇಶಿ ಷೇರುಪೇಟೆಗಳಲ್ಲಿ ವಹಿವಾಟಿನ ಏರಿಕೆಗೆ ಕಾರಣವಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,534 ಅಂಶ ಜಿಗಿತ ಕಂಡು 54,326 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 456 ಅಂಶ ಹೆಚ್ಚಾಗಿ 16,266 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,532 ಅಂಶ, ನಿಫ್ಟಿ 484 ಅಂಶ ಏರಿಕೆ ಕಂಡುಕೊಂಡಿದೆ.

ಡಾ. ರೆಡ್ಡೀಸ್‌ ಷೇರು ಮೌಲ್ಯ ಶೇ 8.10ರಷ್ಟು ಗರಿಷ್ಠ ಏರಿಕೆ ಕಂಡಿತು.

ADVERTISEMENT

ಮಂದಗತಿಯ ಆರ್ಥಿಕ ಬೆಳವಣಿಗೆ ಹಾಗೂ ಜಾಗತಿಕ ಮಟ್ಟದಲ್ಲಿ ಬಡ್ಡಿದರ ಏರಿಕೆಯ ಆತಂಕವು ಹೂಡಿಕೆದಾರರನ್ನು ಎಚ್ಚರಿಕೆಯಿಂದ ವಹಿವಾಟು ನಡೆಸುವಂತೆ ಮಾಡಲಿದೆ. ಉತ್ತಮ ಕಂಪನಿಗಳ ಷೇರುಗಳ ಗಳಿಕೆ ಚೆನ್ನಾಗಿರಲಿದೆ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಮಾರುಕಟ್ಟೆಯು ಗುರುವಾರದ ವಹಿವಾಟಿನಿಂದ ಸಂಪೂರ್ಣವಾಗಿ ‘ಯು–ಟರ್ನ್‌’ ತೆಗೆದುಕೊಂಡಿತು. ಏಷ್ಯಾದ ಷೇರುಪೇಟೆಗಳಲ್ಲಿನ ಗಳಿಕೆಯು ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು ಎಂದು ಕೋಟಕ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಡೆಪ್ಯುಟಿ ಉಪಾಧ್ಯಕ್ಷ ಅಮೋಲ್‌ ಅಠಾವಳೆ ತಿಳಿಸಿದ್ದಾರೆ.

ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಶೇ 2.13ರಷ್ಟು ಮತ್ತು ಮಿಡ್‌ಕ್ಯಾಪ್‌ ಇಂಡೆಕ್ಸ್‌ ಶೇ 1.98ರಷ್ಟು ಏರಿಕೆ ಕಂಡಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 0.11ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 111.9 ಡಾಲರ್‌ಗಳಿಗೆ ತಲುಪಿತು.

ಮರಳಿತು ₹ 5 ಲಕ್ಷ ಕೋಟಿ: ಸಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 5 ಲಕ್ಷ ಕೋಟಿಗಳಷ್ಟು ಹೆಚ್ಚಾಯಿತು. ಇದರಿಂದ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹ 254.11 ಲಕ್ಷ ಕೋಟಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.