ADVERTISEMENT

ದಾಖಲೆಯ ಮಟ್ಟಕ್ಕೆ ಸೆನ್ಸೆಕ್ಸ್ ಜಿಗಿತ

ಕಚ್ಚಾ ತೈಲ ಬೆಲೆ ಇಳಿಕೆ, ವಿದೇಶಿ ಹೂಡಿಕೆ ಒಳಹರಿವು

ಪಿಟಿಐ
Published 28 ನವೆಂಬರ್ 2022, 16:26 IST
Last Updated 28 ನವೆಂಬರ್ 2022, 16:26 IST

ಮುಂಬೈ (ಪಿಟಿಐ): ದೇಶದ ಷೇರುಪೇಟೆ ಸಂವೇದಿ ಸೂಚ್ಯಂಗಳು ಸೋಮವಾರದ ವಹಿವಾಟಿನಲ್ಲಿ ಹೊಸ ದಾಖಲೆಯ ಮಟ್ಟ ತಲುಪಿವೆ. ವಿದೇಶಿ ಬಂಡವಾಳದ ಒಳಹರಿವು, ಕಚ್ಚಾ ತೈಲದ ಬೆಲೆ ಕುಸಿತ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳನ್ನು ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದು ಸೂಚ್ಯಂಕಗಳ ಏರಿಕೆಗೆ ಕಾರಣವಾದವು.

ಸತತ ಐದನೆಯ ದಿನವೂ ಗಳಿಕೆ ಕಂಡ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 211 ಅಂಶ ಜಿಗಿಯಿತು. ದಾಖಲೆಯ 62,504 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 50 ಅಂಶ ಏರಿಕೆ ಕಂಡು ದಾಖಲೆಯ 18,562 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

‘ವಿದೇಶಿ ಹೂಡಿಕೆದಾರರ ಜೊತೆಗೆ ದೇಶಿ ಹೂಡಿಕೆದಾರರು ಕೂಡ ಷೇರುಗಳ ಖರೀದಿಗೆ ಹೆಚ್ಚಿನ ಗಮನ ನೀಡಿದ್ದಾರೆ’ ಎಂದು ಕೋಟಕ್ ಇನ್‌ವೆಸ್ಟ್‌ಮೆಂಟ್‌ ಅಡ್ವೈಸರ್ಸ್‌ ಲಿಮಿಟೆಡ್‌ನ ಲಕ್ಷ್ಮೀ ಅಯ್ಯರ್ ಹೇಳಿದ್ದಾರೆ.

ADVERTISEMENT

ಸೆನ್ಸೆಕ್ಸ್‌ನ ಮೂವತ್ತು ಕಂಪನಿಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇಕಡ 3.48ರಷ್ಟು ಏರಿಕೆ ದಾಖಲಿಸಿದವು. ಸೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಷೇರುಪೇಟೆಗಳು ನಕಾರಾತ್ಮಕವಾಗಿ ಅಂತ್ಯ ಕಂಡವು.

‘ಜಾಗತಿಕ ಮಟ್ಟದಲ್ಲಿ ಪೂರಕ ವಾತಾವರಣ ಇಲ್ಲದಿದ್ದರೂ ದೇಶಿ ಮಾರುಕಟ್ಟೆಗಳು ದಾಖಲೆಯ ಮಟ್ಟವನ್ನು ತಲುಪಿವೆ. ಕಚ್ಚಾ ತೈಲದ ಬೆಲೆ ಇಳಿಕೆಯ ಕಾರಣದಿಂದಾಗಿ ತೈಲ ಹಾಗೂ ಅನಿಲ ವಲಯದ ಷೇರುಗಳ ಬೆಲೆ ಹೆಚ್ಚಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.