ADVERTISEMENT

ಪಶ್ಚಿಮ ಏಷ್ಯಾದ ಬಿಕ್ಕಟ್ಟು: ಷೇರು ಸೂಚ್ಯಂಕಗಳ ಇಳಿಕೆ

ಪಿಟಿಐ
Published 23 ಜೂನ್ 2025, 15:53 IST
Last Updated 23 ಜೂನ್ 2025, 15:53 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟು ಮತ್ತು ಇರಾನ್‌ನ ಮೂರು ಪ್ರಮುಖ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯು ಹೂಡಿಕೆದಾರರು ಭೀತಿಗೆ ನೂಕಿದೆ. ಹೀಗಾಗಿ, ಸೋಮವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಆಗಿದೆ. ಇದರ ಜೊತೆಗೆ, ಐ.ಟಿ, ತಂತ್ರಜ್ಞಾನ ಮತ್ತು ಆಟೊ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ ಕಾರಣದಿಂದಾಗಿ ಸೂಚ್ಯಂಕಗಳು ಇಳಿಕೆ ದಾಖಲಿಸಿದವು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 511 ಅಂಶ ಇಳಿಕೆಯಾಗಿ, 81,896ಕ್ಕೆ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನ ವೇಳೆ ಸೆನ್ಸೆಕ್ಸ್‌ 931 ಅಂಶಗಳವರೆಗೂ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 140 ಅಂಶ ಕಡಿಮೆಯಾಗಿ, 24,971ಕ್ಕೆ ಕೊನೆಗೊಂಡಿದೆ. 

ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.49ರಷ್ಟು ಏರಿಕೆಯಾಗಿದೆ. ಪ್ರತೀ ಬ್ಯಾರೆಲ್‌ಗೆ ದರವು 77.39 ಡಾಲರ್ ಆಗಿದೆ. 

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರದ ವಹಿವಾಟಿನಲ್ಲಿ ₹7,940 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. 

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 23 ಪೈಸೆ ಇಳಿಕೆಯಾಗಿದೆ. ಪ್ರತೀ ಡಾಲರ್ ಮೌಲ್ಯ ₹86.78 ಆಗಿದೆ. ಇದು ಐದು ತಿಂಗಳ ಕನಿಷ್ಠ ಮಟ್ಟವಾಗಿದೆ.

ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ದಾಳಿಯಿಂದ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದೆ ಮತ್ತು ಕಚ್ಚಾ ತೈಲದ ಬೆಲೆ ಚಂಚಲವಾಗಿದೆ. ದೇಶದ ಷೇರು ಸೂಚ್ಯಂಕ ಇಳಿಕೆಯು ಸಹ ರೂಪಾಯಿ ಮೌಲ್ಯ ಕಡಿಮೆಯಾಗಲು ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.