ADVERTISEMENT

ಬಹುಬೇಡಿಕೆಯ ಕಾರುಗಳ ತಯಾರಿಕೆ ಹೆಚ್ಚಿಸಲು ಮಾರುತಿ ಸುಜುಕಿ ಚಿಂತನೆ

ಪಿಟಿಐ
Published 5 ನವೆಂಬರ್ 2023, 15:20 IST
Last Updated 5 ನವೆಂಬರ್ 2023, 15:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುಕಟ್ಟೆಯಲ್ಲಿನ ಬೇಡಿಕೆಯ ಆಧಾರದಲ್ಲಿ ನಿರ್ದಿಷ್ಟ ಮಾಡೆಲ್‌ನ ವಾಹನಗಳನ್ನು ತಯಾರಿಸಲು ಸಾಧ್ಯವಾಗುವಂತೆ ತಯಾರಿಕಾ ಸಾಮರ್ಥ್ಯವನ್ನು ರೂಪಿಸಿಕೊಳ್ಳಲು ಮಾರುತಿ ಸುಜುಕಿ ಇಂಡಿಯಾ ಸಂಸ್ಥೆಯು ಚಿಂತನೆ ನಡೆಸಿದೆ.

ಕಂಪೆನಿಯ ಅಧಿಕಾರಿಯೊಬ್ಬರ ಪ್ರಕಾರ, ಹೆಚ್ಚು ಬೇಡಿಕೆಯುಳ್ಳ ವಾಹನಗಳ ತಯಾರಿಕಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿ, ಆರಂಭಿಕ ಹಂತದ ಕಾರುಗಳ ತಯಾರಿಕೆಯನ್ನು ಕುಗ್ಗಿಸುವ ಸಾಧ್ಯತೆಗಳನ್ನು ಕಂಪನಿ ಪರಿಶೀಲಿಸುತ್ತಿದೆ.

ಯುಟಿಲಿಟಿ ವಾಹನಗಳು ಹಾಗೂ ಸಣ್ಣ ಕಾರುಗಳ ಬೇಡಿಕೆ ವಿರುದ್ಧ ದಿಕ್ಕಿನಲ್ಲಿವೆ. ಹೀಗಾಗಿ, ಬೇಡಿಕೆ ಆಧಾರದಲ್ಲಿ ಕಾರುಗಳನ್ನು ತಯಾರಿಸಲಾಗುವುದು ಎಂದು ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ (ಕಾರ್ಪೊರೇಟ್‌ ವ್ಯವಹಾರ) ರಾಹುಲ್‌ ಭಾರ್ತಿ ಹೇಳಿದರು.

ADVERTISEMENT

ಲಾಭಾಂಶವು ಇತ್ತೀಚಿನ ದಿನಗಳಲ್ಲಿ ಕುಸಿಯಲು ಕಡಿಮೆ ಬೇಡಿಕೆಯುಳ್ಳ ಕಾರುಗಳ ಉತ್ಪಾದನೆ ಹೆಚ್ಚಿರುವುದು ಕಾರಣ ಎಂಬುದು ಮನದಟ್ಟಾಗಿದೆ. ಇನ್ನೊಂದೆಡೆ, ಮೊದಲ ಬಾರಿಗೆ ಕಾರು ಖರೀದಿಸುವವರ ಪ್ರಮಾಣ ಶೇ 10ರಷ್ಟು ಕುಗ್ಗಿದೆ. ಈ ವರ್ಗದ ಆದಾಯ ಒಮ್ಮೆ ಏರಿದಂತೆ ಕಾರುಗಳ ಮಾರಾಟವು ಏರುಮುಖವಾಗುವ ವಿಶ್ವಾಸವಿದೆ ಎಂದು ಹೇಳಿದರು.

ಪ್ರಸ್ತುತ, ಹರಿಯಾಣ ಮತ್ತು ಗುಜರಾತ್‌ನಲ್ಲಿರುವ ತನ್ನ ಘಟಕಗಳಿಂದ ಒಟ್ಟು ತಯಾರಕಾ ಸಾಮರ್ಥ್ಯವು ವಾರ್ಷಿಕ 23 ಲಕ್ಷ ವಾಹನಗಳಾಗಿವೆ.

ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಆರಂಭಿಕ ಹಂತದ ಕಾರುಗಳ ಮಾರಾಟ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ 35 ಸಾವಿರ ಕಾರುಗಳಿಗೆ ಕುಗ್ಗಿದೆ. 2018–19ರಲ್ಲಿ ಇದು ಗರಿಷ್ಠ, ಅಂದರೆ 1.38 ಲಕ್ಷ ಕಾರುಗಳಾಗಿತ್ತು.

‘ಆದರೆ, ಕಾರುಗಳ ರಫ್ತಿನಲ್ಲಿ ಸಂಸ್ಥೆ ಮುನ್ನಡೆ ಕಾಯ್ದುಕೊಂಡಿದೆ. ಮುಖ್ಯವಾಗಿ ಆಫ್ರಿಕಾ, ಲ್ಯಾಟಿನ್‌ ಅಮೆರಿಕ, ಮಧ್ಯಪೂರ್ವದ ರಾಷ್ಟ್ರಗಳತ್ತ ಕಂಪನಿಯು ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದೆ’ ಎಂದು ಭಾರ್ತಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.