ADVERTISEMENT

ಮೆಗಲಿಥ್‌: ಅಗ್ಗದ ವಸತಿ ಯೋಜನೆ

ನಗರ ಪ್ರದೇಶದ ಆರ್ಥಿಕ ದುರ್ಬಲ ವರ್ಗದವರಿಗೆ ನೆರವು

​ಕೇಶವ ಜಿ.ಝಿಂಗಾಡೆ
Published 22 ಮಾರ್ಚ್ 2019, 19:55 IST
Last Updated 22 ಮಾರ್ಚ್ 2019, 19:55 IST
ಮಲ್ಲಣ್ಣ ಸಾಸಲು
ಮಲ್ಲಣ್ಣ ಸಾಸಲು   

ಬೆಂಗಳೂರು: ಮೆಗಲಿಥ್‌ ವೆಂಚರ್ಸ್‌ ಸಂಸ್ಥೆಯು, ನಗರ ಪ್ರದೇಶದಲ್ಲಿನ ಆರ್ಥಿಕವಾಗಿ ದುರ್ಬಲ ವರ್ಗದವರು (ಇಡಬ್ಲ್ಯುಎಸ್‌) ಮತ್ತು ಕಡಿಮೆ ಆದಾಯದವರಿಗೆ (ಎಲ್‌ಐಜಿ) ಅಗ್ಗದ ವಸತಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಂದಾಗಿದೆ.

ವಾರ್ಷಿಕ ₹ 3 ರಿಂದ 6 ಲಕ್ಷದಷ್ಟು ಆದಾಯ ಹೊಂದಿರುವ, ಪ್ರತಿ ತಿಂಗಳೂ ₹ 7ರಿಂದ ₹ 8 ಸಾವಿರ ಮನೆ ಬಾಡಿಗೆ ಪಾವತಿಸುವ ಸಾಮರ್ಥ್ಯ ಹೊಂದಿದವರು ಇದೇ ಮೊತ್ತವನ್ನು 20 ವರ್ಷಗಳವರೆಗೆ ತಿಂಗಳ ಸಮಾನ ಕಂತಿನ (ಇಎಂಐ) ರೂಪದಲ್ಲಿ ಸಾಲ ಮರುಪಾವತಿಸಿ ಸ್ವಂತ ಮನೆಯ ಮಾಲೀಕರಾಗುವ ಯೋಜನೆ ಇದಾಗಿದೆ.

‘ಮಹಾನಗರಗಳ ಹೊರ ವಲಯದಲ್ಲಿನ ಕೈಗಾರಿಕಾ ಘಟಕಗಳ ಸಮೀಪದಲ್ಲಿ ಇಂತಹ ವಸತಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು.

ADVERTISEMENT

ಇದು ಸ್ಥಳೀಯರಿಗೆ ಹೆಚ್ಚು ಪ್ರಯೋಜನಕಾರಿ ಎನಿಸಲಿದೆ. ನೆಲಮಂಗಲ ಬಳಿ ಮೊದಲ ಯೋಜನೆ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. 24.5 ಎಕರೆ ಪ್ರದೇಶದಲ್ಲಿ 3,900 ಮನೆಗಳನ್ನು ನಿರ್ಮಿಸಲಾಗುವುದು. ಒಂದು (360 ಚದರ ಅಡಿ) ಮತ್ತು ಎರಡು ಬೆಡ್‌ರೂಂಗಳ (540 ಚದರ ಅಡಿ) ಮನೆಗಳ ಬೆಲೆ ₹ 10 ಲಕ್ಷದಿಂದ ₹ 14 ಲಕ್ಷದವರೆಗೆ ಇರಲಿದೆ. ಎಲ್ಲ ಯೋಜನೆಗಳಲ್ಲಿ ಒಂದೇ ಬಗೆಯ ವಿನ್ಯಾಸದ ಮನೆಗಳನ್ನು ನಿರ್ಮಿಸಲಾಗುವುದು. ನಿರ್ಮಾಣದಲ್ಲಿ ಪ್ರೀ–ಕಾಸ್ಟ್‌ ತಂತ್ರಜ್ಞಾನ ಬಳಸಲಾಗುವುದು. ಈ ವಸತಿ ಯೋಜನೆಯಲ್ಲಿನ ಎಲ್ಲ ಮನೆಗಳು ಗ್ರೌಂಡ್‌ ಪ್ಲಸ್‌ 3 ಅಪಾರ್ಟ್‌ಮೆಂಟ್‌ ಸ್ವರೂಪದಲ್ಲಿ ಇರಲಿವೆ’ ಎಂದು ಮೆಗಲಿಥ್‌ ವೆಂಚರ್ಸ್‌ನ ಸ್ಥಾಪಕ ಮತ್ತು ಸಿಇಒ ಆಗಿರುವ ಮಲ್ಲಣ್ಣ ಸಾಸಲು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನೆಲಮಂಗಲ ಬಳಿ ಇರುವ ಕೈಗಾರಿಕಾ ಘಟಕಗಳಲ್ಲಿ ದುಡಿಯುವ ಕುಟುಂಬಗಳನ್ನೇ ಮುಖ್ಯ ಗುರಿಯಾಗಿರಿಸಿಕೊಂಡು ಈ ವಸತಿ ಯೋಜನೆ ರೂಪಿಸಲಾಗಿದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಲಭ್ಯವಾಗುವ ಸಾಲದ ಸಬ್ಸಿಡಿ ನೆರವು ಈ ಯೋಜನೆಯಲ್ಲಿ ನೆರವಿಗೆ ಬರಲಿದೆ. ಗೃಹ ಹಣಕಾಸು ಸಂಸ್ಥೆಗಳಿಂದ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಿಕೊಡಲು ಸಂಸ್ಥೆ ನೆರವಾಗಲಿದೆ. ಯೋಜನೆಯ ಫಲಾನುಭವಿಗಳನ್ನು ಗುರುತಿಸಲು ಸಂಸ್ಥೆಯು ಮೊಬೈಲ್‌ ಆ್ಯಪ್ ಅಭಿವೃದ್ಧಿಪಡಿಸಿದೆ.

ಸರ್ಕಾರದ ಕನಸನ್ನು ನನಸು ಮಾಡಲು ಮೆಗಲಿಥ್‌ ವೆಂಚರ್ಸ್‌ ಮುಂದಾಗಿದೆ. ನಗರಗಳಲ್ಲಿನ ಬಡವರ ವಸತಿ ಅಗತ್ಯಗಳನ್ನು ಪರಿಹರಿಸುವ ಪ್ರಯತ್ನ ಇದಾಗಿದೆ. ನೆಲಮಂಗಲ ಹೊರತುಪಡಿಸಿ ದೊಡ್ಡಬಳ್ಳಾಪುರ, ಹೆಸರಘಟ್ಟ ಮತ್ತು ಹೊಸೂರು ಬಳಿಯೂ ಇಂತಹ ಯೋಜನೆ ಕೈಗೆತ್ತಿಕೊಳ್ಳಲು ಸಂಸ್ಥೆ ಉದ್ದೇಶಿಸಿದೆ. ‘ನಿರ್ದಿಷ್ಟ ಸ್ಥಳದಲ್ಲಿ ಎರಡರಿಂದ ಮೂರು ಸಾವಿರದಷ್ಟು ಮನೆ ಖರೀದಿದಾರರು ಕಂಡು ಬಂದರೆ ಅವರು ದುಡಿಯುವ ಸ್ಥಳದ ಹತ್ತಿರದಲ್ಲಿಯೇ ವಸತಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳಿಗೆ ಹತ್ತಿರದಲ್ಲಿಯೇ ಇಂತಹ ಗೃಹ ನಿರ್ಮಾಣ ಯೋಜನೆಗಳನ್ನು ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗುವುದು. ದೇಶದ ಇತರ ನಗರಗಳಿಗೂ ಈ ಪರಿಕಲ್ಪನೆಯಡಿ ವಸತಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ’ ಎಂದೂ ಮಲ್ಲಣ್ಣ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.