ADVERTISEMENT

ಮೇಘಾಲಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ₹5 ಇಳಿಕೆ

ಪಿಟಿಐ
Published 16 ಫೆಬ್ರುವರಿ 2021, 15:06 IST
Last Updated 16 ಫೆಬ್ರುವರಿ 2021, 15:06 IST
ಸಾಂದರ್ಭಿಕ ಚಿತ್ರ – ಕೃಪೆ: ಐಸ್ಟಾಕ್
ಸಾಂದರ್ಭಿಕ ಚಿತ್ರ – ಕೃಪೆ: ಐಸ್ಟಾಕ್   

ಶಿಲ್ಲಾಂಗ್: ರಾಜ್ಯದಲ್ಲಿ ವ್ಯಾಟ್‌ ಕಡಿಮೆ ಮಾಡುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಚಿಲ್ಲರೆ ಮಾರಾಟ ಬೆಲೆ ₹5 ಇಳಿಕೆ ಮಾಡಲಾಗಿದೆ ಎಂದು ಮೇಘಾಲಯ ಮುಖ್ಯಮಂತ್ರಿ ಕೆ.ಸಂಗ್ಮಾ ಮಂಗಳವಾರ ತಿಳಿಸಿದ್ದಾರೆ. ವಾಣಿಜ್ಯ ಸರಕು ಸಾಗಣೆದಾರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಲಾಗಿದೆ.

ಇದರಿಂದಾಗಿ ಪ್ರತಿ ಲೀಟರ್‌ಗೆ ₹91.26 ಇದ್ದ ಪೆಟ್ರೋಲ್ ದರ ಈಗ ₹85.86 ಆಗಲಿದೆ. ₹86.23 ಇದ್ದ ಡೀಸೆಲ್ ದರ ₹79.13 ಆಗಲಿದೆ ಎಂದು ಸಂಪುಟ ಸಹೋದ್ಯೋಗಿಗಳು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳ ಜತೆ ನಡೆಸಿದ ಸಭೆಯ ಬಳಿಕ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.

ಕಳೆದ ವಾರವಷ್ಟೇ ಮೇಘಾಲಯ ಸರ್ಕಾರವು ಪೆಟ್ರೋಲ್, ಡೀಸೆಲ್‌ ಮೇಲೆ ₹2 ರಿಯಾಯಿತಿ ನೀಡಿತ್ತು. ಇದೀಗ ಪೆಟ್ರೋಲ್‌ ಬೆಲೆ ಒಟ್ಟು ₹7.4 ಹಾಗೂ ಡೀಸೆಲ್ ಬೆಲೆ ₹7.1 ಇಳಿಕೆಯಾದಂತಾಗಿದೆ ಎಂದು ಸಂಗ್ಮಾ ಹೇಳಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದ ವಾಣಿಜ್ಯ ಸರಕು ಸಾಗಣೆದಾರರ ಮುಷ್ಕರ ಕೊನೆಗೊಳ್ಳುವ ನಿರೀಕ್ಷೆ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡದಿದ್ದಲ್ಲಿ ಉಪವಾಸ ಮುಷ್ಕರ ನಡೆಸುವುದಾಗಿಯೂ ವಾಣಿಜ್ಯ ಸರಕು ಸಾಗಣೆದಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ದೇಶದಲ್ಲಿ ಸತತ ಎಂಟು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದ್ದು, ಮಂಗಳವಾರ ಗರಿಷ್ಠ ಮಟ್ಟ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ 96 ರೂಪಾಯಿ ಸಮೀಪದಲ್ಲಿದೆ. ವಾಣಿಜ್ಯ ನಗರಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ₹95.75, ಡೀಸೆಲ್‌ ಬೆಲೆ ₹86.72 ಮುಟ್ಟಿದೆ. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 30 ಪೈಸೆ ಹೆಚ್ಚಳವಾಗಿ ₹89.29 ಮತ್ತು ಡೀಸೆಲ್‌ 35 ಪೈಸೆ ಏರಿಕೆಯೊಂದಿಗೆ ₹79.70 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹92.82 ಹಾಗೂ ಲೀಟರ್‌ ಡೀಸೆಲ್‌ಗೆ ₹84.49 ತೆರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.