ADVERTISEMENT

ಎನ್‌ಪಿಎ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಶಕ್ತ ಇಂಡಿಯಾ ಎಎಂಸಿ ಸ್ಥಾಪನೆ

‘ಎಎಂಸಿ’ಗೆ ಪೂರಕವಾಗಿ ಪರ್ಯಾಯ ಹೂಡಿಕೆ ನಿಧಿ ಅಸ್ತಿತ್ವಕ್ಕೆ

ಪಿಟಿಐ
Published 15 ನವೆಂಬರ್ 2018, 18:52 IST
Last Updated 15 ನವೆಂಬರ್ 2018, 18:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಾಗದ ಸಾಲದ ಸಮಸ್ಯೆಗೆ (ಎನ್‌ಪಿಎ) ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ರಚಿಸಲಾಗಿದ್ದ ಮೆಹ್ತಾ ಸಮಿತಿಯು, ’ಸಶಕ್ತ ಇಂಡಿಯಾ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ’ (ಎಎಂಸಿ) ಸ್ಥಾಪಿಸಿದೆ.

‘ಈ ‘ಎಎಂಸಿ’ಗೆ ಹಣಕಾಸಿನ ನೆರವು ಒದಗಿಸುವ ಪರ್ಯಾಯ ಹೂಡಿಕೆದಾರರನ್ನು ಗುರುತಿಸಲು ಸಮಿತಿಯು ಈಗ ಕಾರ್ಯಪ್ರವೃತ್ತವಾಗಿದೆ’ ಎಂದು ಬ್ಯಾಂಕ್‌ ಪರಿಣತರ ಸಮಿತಿಯ ಅಧ್ಯಕ್ಷ ಸುನಿಲ್‌ ಮೆಹ್ತಾ ಹೇಳಿದ್ದಾರೆ.

ಬ್ಯಾಂಕಿಂಗ್‌ ವಲಯದಲ್ಲಿನ ವಸೂಲಾಗದ ಸಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು ಜುಲೈ ತಿಂಗಳಲ್ಲಿ ಐದು ಅಂಶಗಳ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಉದ್ದೇಶಕ್ಕೆ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ಸುನಿಲ್‌ ಮೆಹ್ತಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.

ADVERTISEMENT

₹ 500 ಕೋಟಿಗಿಂತ ಹೆಚ್ಚಿನ ಮೊತ್ತದ ‘ಎನ್‌ಪಿಎ’ಗಳಿಗೆ ಪರಿಹಾರ ಕಂಡುಕೊಳ್ಳಲು ಸಮಿತಿಯು ‘ಎಎಂಸಿ’ ಸ್ಥಾಪಿಸಿದೆ. ಇದಕ್ಕೆ ಪೂರಕವಾಗಿ ಪರ್ಯಾಯ ಹೂಡಿಕೆ ನಿಧಿಯನ್ನೂ (ಎಐಎಫ್‌) ಅಸ್ತಿತ್ವಕ್ಕೆ ತಂದಿದೆ. ‘ಎಐಎಫ್‌’ನಲ್ಲಿ ಹಣ ತೊಡಗಿಸಲು ಮುಂದೆ ಬರುವ ದೇಶಿ ಮತ್ತು ವಿದೇಶಿ ಹೂಡಿಕೆದಾರರ ಜತೆ ಸಮಿತಿಯು ಈಗ ಮಾತುಕತೆ ಆರಂಭಿಸಿದೆ. ಈ ಸಂಬಂಧ ಖಾಸಗಿ ವಲಯದ ಬ್ಯಾಂಕ್‌ಗಳನ್ನೂ ಸಂಪರ್ಕಿಸಲಾಗಿದೆ’ ಎಂದು ಮೆಹ್ತಾ ತಿಳಿಸಿದ್ದಾರೆ.

₹ 500 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ 200 ‘ಎನ್‌ಪಿಎ’ ಖಾತೆಗಳು ಇವೆ. ಇವುಗಳ ಒಟ್ಟಾರೆ ಸಾಲದ ಹೊರೆಯು ₹ 3.1 ಲಕ್ಷ ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

ಮೆಹ್ತಾ ಸಮಿತಿಯಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೇರಿದಂತೆ ಎಲ್ಲ ಪ್ರಮುಖ ಬ್ಯಾಂಕ್‌ಗಳ ಪ್ರತಿನಿಧಿಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.