
ನವದೆಹಲಿ: ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಮೆಕ್ಸಿಕೊ ಸುಂಕ ಹೆಚ್ಚಳ ಮಾಡಿರುವುದು, ಭಾರತದ ಎಲೆಕ್ಟ್ರಾನಿಕ್ಸ್, ಲೋಹ, ವಾಹನಗಳ ಬಿಡಿಭಾಗಗಳು, ರಾಸಾಯನಿಕ ರಫ್ತಿನ ಮೇಲೆ ಭಾರಿ ಹೊಡೆತ ಬೀಳಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
2026ರ ಜನವರಿ 1ರಿಂದ ಪರಿಷ್ಕೃತ ಸುಂಕ ಜಾರಿಗೆ ಬರಲಿದೆ. ಕೆಲವು ಸರಕುಗಳಿಗೆ ಕನಿಷ್ಠ ಶೇ 5ರಿಂದ ಗರಿಷ್ಠ ಶೇ 50ರವರೆಗೆ ಸುಂಕ ಹೆಚ್ಚಿಸಲಾಗಿದೆ.
ಭಾರತದಿಂದ ಮೆಕ್ಸಿಕೊಕ್ಕೆ ರಫ್ತಾಗುವ ಸರಕುಗಳಲ್ಲಿ ವಾಹನಗಳು ಮತ್ತು ವಾಹನಗಳ ಬಿಡಿಭಾಗಗಳ ಪಾಲು ಗರಿಷ್ಠ ಮಟ್ಟದಲ್ಲಿದೆ. ಆಮದು ಸುಂಕ ಹೆಚ್ಚಳವು ಈ ಕ್ಷೇತ್ರದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ (ಜಿಟಿಆರ್‌ಐ) ಹೇಳಿದೆ.
ಭಾರತದಿಂದ ಆಮದು ಮಾಡಿಕೊಳ್ಳುವ ಪ್ರಯಾಣಿಕ ವಾಹನಗಳಿಗೆ ಮೆಕ್ಸಿಕೊ ಸದ್ಯ ಶೇ 20ರಷ್ಟು ಸುಂಕ ವಿಧಿಸುತ್ತಿದೆ. 2026ರ ಜನವರಿಯಿಂದ ಇದು ಶೇ 35ಕ್ಕೆ ಏರಿಕೆಯಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತವು 938.35 ದಶಲಕ್ಷ ಡಾಲರ್ ಮೊತ್ತದ (₹8,500 ಕೋಟಿ ) ವಾಹನಗಳನ್ನು ಮತ್ತು 507.26 ದಶಲಕ್ಷ ಡಾಲರ್ (₹4,595 ಕೋಟಿ) ಮೊತ್ತದ ವಾಹನಗಳ ಬಿಡಿಭಾಗಗಳನ್ನು ಮೆಕ್ಸಿಕೊಕ್ಕೆ ರಫ್ತು ಮಾಡಿತ್ತು.
ಭಾರತದ ಜವಳಿ, ಪ್ಲಾಸ್ಟಿಕ್, ಸಾವಯವ ರಾಸಾಯನಿಕಗಳು, ಎಲೆಕ್ಟ್ರಾನಿಕ್ಸ್, ಜೌಷಧ, ಎಲೆಕ್ಟ್ರಿಕ್ ವಸ್ತುಗಳ ರಫ್ತಿನ ಮೇಲೆ ಮೆಕ್ಸಿಕೊದ ಆಮದು ಸುಂಕ ಹೆಚ್ಚಳವು ಪರಿಣಾಮ ಬೀರಲಿದೆ ಎಂದು ಭಾರತೀಯ ರಫ್ತುದಾರರ ಒಕ್ಕೂಟದ (ಎಫ್‌ಐಇಒ) ಪ್ರಧಾನ ನಿರ್ದೇಶಕ ಅಜಯ್ ಶಾಹಿ ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಕಳೆದ ಹಣಕಾಸು ವರ್ಷದಲ್ಲಿ ಮೆಕ್ಸಿಕೊಕ್ಕೆ 284.53 ದಶಲಕ್ಷ ಡಾಲರ್ ಮೊತ್ತದ (₹2,577 ಕೋಟಿ) ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿತ್ತು. ಜನವರಿಯಿಂದ ಸ್ಮಾರ್ಟ್‌ಫೋನ್ ಆಮದು ಸುಂಕವು ಶೇ 35ಕ್ಕೆ ಏರಿಕೆಯಾಗಲಿದೆ. ಇದು ಭಾರತದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಿಗೆ ಪೆಟ್ಟು ನೀಡಲಿದೆ. ಭಾರತದಿಂದ ಕೈಗಾರಿಕಾ ಯಂತ್ರೋಪಕರಣಗಳನ್ನು ಮೆಕ್ಸಿಕೊ ಆಮದು ಮಾಡಿಕೊಳ್ಳುತ್ತಿದ್ದು, ಈ ಉದ್ಯಮದ ಮೇಲೂ ಶೇ 35ರಷ್ಟು ಸುಂಕ ಹೆಚ್ಚಳವು ಬರೆ ಎಳೆಯಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಮೆಕ್ಸಿಕೊ ವಿಧಿಸಿರುವ ಆಮದು ಸುಂಕ
ಸರಕು: ಈಗಿನ ದರ; ಪರಿಷ್ಕೃತ ದರ (ಶೇ)
ದ್ವಿಚಕ್ರ ವಾಹನಗಳು: 20; 35
ಸ್ಮಾರ್ಟ್‌ಫೋನ್: ಸುಂಕ ರಹಿತ; 35
ಅಲ್ಯೂಮಿನಿಯಂ: 10; 35
ಕಬ್ಬಿಣ ಮತ್ತು ಉಕ್ಕು: 15; 35
ಜವಳಿ: 15; 35
ಕಾಫಿ, ಟಿ: 5; 15
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.