ADVERTISEMENT

ಬ್ರಿಟನ್ನಿನ ಎಂ.ಜಿ ಮೋಟರ್ಸ್‌ ಶೀಘ್ರ ಭಾರತಕ್ಕೆ

ಶೇ 75ರಷ್ಟು ಸ್ಥಳೀಯವಾಗಿ ತಯಾರಿಕೆ

ಇ.ಎಸ್.ಸುಧೀಂದ್ರ ಪ್ರಸಾದ್
Published 15 ಅಕ್ಟೋಬರ್ 2018, 20:00 IST
Last Updated 15 ಅಕ್ಟೋಬರ್ 2018, 20:00 IST
   

ಶಾಂಘೈ: ಬ್ರಿಟನ್ನಿನ ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿ ಎಂ.ಜಿ ಮೋಟರ್ಸ್ 2019ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬ ತಿಳಿಸಿದರು.

ಇಲ್ಲಿನ ಆಂಟಿಂಗ್‌ನಲ್ಲಿರುವ ಎಸ್ಎಐಸಿ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

‘ಮೋರಿಸ್ ಗ್ಯಾರೇಜಸ್ (ಎಂಜಿ) ಕಂಪನಿಯು ಜಾಗತಿಕ ಮಟ್ಟದಲ್ಲಿ ಪುಟ್ಟ ಹ್ಯಾಚ್ ಬ್ಯಾಕ್ ಕಾರುಗಳಿಂದ ಹಿಡಿದು ದೊಡ್ಡ ಎಸ್‌ಯುವಿ ಮತ್ತು ಎರಡನೇ ಹಂತದ ಸ್ವಯಂ ಚಾಲಿತ ಕಾರುಗಳವರೆಗೂ ಬಹಳಷ್ಟು ಮಾದರಿ ಹೊಂದಿದೆ. ಭಾರತದಲ್ಲಿ ಆರಂಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯ ಕಾರ್‌ಗಳನ್ನು ಪರಿಚಯಿಸಲಾಗುವುದು.

ADVERTISEMENT

'ಭಾರತದಲ್ಲಿ ಸದ್ಯಕ್ಕೆ ಸಿ ಮಾದರಿಯ ಎಸ್‌ಯುವಿಗೆ ಬಹಳ ಬೇಡಿಕೆ ಇದೆ. ಹೀಗಾಗಿ ₹15 ಲಕ್ಷದಿಂದ ₹25 ಲಕ್ಷ ಬೆಲೆಯ ಕಾರು ಪರಿಚಯಿಸಲು ಸಿದ್ಧತೆ ನಡೆದಿದೆ. 2020ರಲ್ಲಿ ವಿದ್ಯುತ್ ಚಾಲಿತ ಎಸ್‌ಯುವಿ ಬಿಡುಗಡೆ ಮಾಡಲಾಗುವುದು. ಅಲ್ಲಿಂದ ಪ್ರತಿ ವರ್ಷ ಒಂದು ಹೊಸ ಕಾರು ಪರಿಚಯಿಸಲು ಕಂಪನಿ ಉದ್ದೇಶಿಸಿದೆ.

‘ಗುಜರಾತಿನ ಹಲೋಲ್‌ನಲ್ಲಿ ಕಂಪನಿ ತನ್ನ ತಯಾರಿಕಾ ಘಟಕ ಹೊಂದಿದೆ. ಇದಕ್ಕಾಗಿ ₹ 3,600 ಕೋಟಿ ಹೂಡಿಕೆ ಮಾಡಲಾಗಿದೆ. ಈ ಹಿಂದೆ ಇದೇ ಘಟಕವನ್ನು ಅಮೆರಿಕದ ಜಿಎಂ ಮೋಟರ್ಸ್ ಹೊಂದಿತ್ತು. ಈಗ ಇದನ್ನು ಸಂಪೂರ್ಣವಾಗಿ ಬದಲಿಸಲಾಗಿದೆ.

‘ಸಂಪೂರ್ಣವಾಗಿ ಭಾರತದಲೇ ತಯಾರಿಸುವುದು ಕಂಪನಿಯ ಉದ್ದೇಶವಾಗಿದೆ. ಆರಂಭದಲ್ಲಿ
ಶೇ 75ರಷ್ಟು ಸ್ಥಳೀಯವಾಗಿ ತಯಾರಿಸಲಾಗುವುದು. ಈಗಾಗಲೇ 300 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಈ ಸಂಖ್ಯೆಯನ್ನು 2020ರ ಹೊತ್ತಿಗೆ 1500ಕ್ಕೆ ಹೆಚ್ಚಿಸಲಾಗುವುದು.

'ಈಗಾಗಲೇ ಬಹಳಷ್ಟು ವಿದೇಶಿ ಕಂಪನಿಗಳು ಭಾರತದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ. ಇಂತಹ ಸವಾಲಿನ ಹಾದಿಯ ಅರಿವು ನಮಗೆ ಇದೆ. ಹೀಗಾಗಿ ಪ್ರತಿಷ್ಠಿತ ಮತ್ತು ಅನುಭವಿ ಡೀಲರ್ ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ. ಜತೆಗೆ 100ಕ್ಕೂ ಹೆಚ್ಚು ಗ್ರಾಹಕ ಸೇವಾ ಘಟಕ ಸ್ಥಾಪಿಸಲಾಗುವುದು.

‘ಭಾರತದಲ್ಲಿನ ತಯಾರಿಕಾ ಘಟಕ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರಲಿದೆ. ಕೆಲ ವಿಭಾಗಗಳು ಸಂಪೂರ್ಣ ರೋಬೊಗಳಿಂದ ಕಾರ್ಯ ನಿರ್ವಹಿಸಲಿವೆ. ಜತೆಗೆ ಶೇ 26ರಷ್ಟು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಈ ಸಂಖ್ಯೆ ಇನ್ನು ಹೆಚ್ಚಿಸುವ ಉದ್ದೇಶವಿದೆ’ ಎಂದು ರಾಜೀವ್‌ ಜಾಬ ಹೇಳಿದರು.

ಕಂಪನಿಯ ಜಾಗತಿಕ ವ್ಯವಹಾರದ ಮುಖ್ಯಸ್ಥ ಮೈಕಲ್ ಯಂಗ್ ಮಾತನಾಡಿ, '2020ರಲ್ಲಿ ಪರಿಚಯಿಸುವ ವಿದ್ಯುತ್ ಚಾಲಿತ ಕಾರು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಲಿದೆ. ಜತೆಗೆ ಎಸ್ಎಐಸಿ ವಿವಿಧ ಶ್ರೇಣಿಯ ವಾಣಿಜ್ಯ ವಾಹನಗಳನ್ನೂ ಹೊಂದಿದ್ದು ಅವುಗಳನ್ನೂ ಹಂತ ಹಂತವಾಗಿ ಪರಿಚಯಿಸಲಾಗುವುದು' ಎಂದರು.

'ವಿದ್ಯುತ್ ಚಾಲಿತ ಕಾರು ತಯಾರಿಕೆ ಕುರಿತು ಭಾರತ ಸರ್ಕಾರ ಉತ್ತಮವಾಗಿ ಪ್ರತಿಕ್ರಿಯಿಸಿದ್ದು, ಇದು ನಮ್ಮನ್ನು ಇನ್ನಷ್ಟು ಉತ್ತೇಜಿಸಿದೆ. ಈ ಮಾದರಿಯ ಕಾರುಗಳನ್ನು ಚೀನಾ ಸೇರಿದಂತೆ ಬಹಳಷ್ಟು ರಾಷ್ಟ್ರಗಳು ಉತ್ತೇಜಿಸು
ತ್ತವೆ. ಜಾಗತಿಕ ತಾಪಮಾನ ತಡೆಗಟ್ಟಲು ಇದುವೇ ಸರಿಯಾದ ಆಯ್ಕೆಯಾಗಿದೆ' ಎಂದರು. ಮಾರುಕಟ್ಟೆ ವಿಭಾಗದ ಗೌರವ್ ಗುಪ್ತ, ವಿನ್ಯಾಸಕ ಜುಂಗ್ ಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.