
ಬೆಂಗಳೂರು: ‘ಭಾರತದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಸಾಮರ್ಥ್ಯದ ವಿಸ್ತರಣೆಗಾಗಿ ₹25,700 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.
ಮಂಗಳವಾರ ನಡೆದ ನವೋದ್ಯಮಗಳ ಸಂಸ್ಥಾಪಕರು ಮತ್ತು ಸಿಇಒಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘2030ರ ವೇಳೆಗೆ ತಂತ್ರಜ್ಞಾನ ವಲಯದ ಒಂದು ಕೋಟಿ ಭಾರತೀಯರಿಗೆ ಎ.ಐ ಕೌಶಲ ಕುರಿತು ತರಬೇತಿ ನೀಡುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.
ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬೆಳವಣಿಗೆ ದರ ಉತ್ತಮವಾಗಿದೆ ಎಂದು ಹೇಳಿದ ಅವರು, ಬಂಡವಾಳ ಹೂಡಿಕೆಯ ಅವಧಿ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.
ಮೈಕ್ರೊಸಾಫ್ಟ್ ಕಂಪನಿಯು ಅಜುರೆ ಬ್ರ್ಯಾಂಡ್‌ನಡಿ ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುತ್ತಿದೆ. 60 ಪ್ರದೇಶಗಳಲ್ಲಿ ಅಜುರೆ ಕಾರ್ಯಾಚರಣೆ ನಡೆಸುತ್ತಿದ್ದು, 30ಕ್ಕೂ ಹೆಚ್ಚು ದತ್ತಾಂಶ ಕೇಂದ್ರಗಳನ್ನು ಹೊಂದಿದೆ.
‘ಭಾರತದ ಎಲ್ಲಾ ವಲಯಗಳಲ್ಲೂ ಜಿಯೊ ಜೊತೆಗೂಡಿ ತಂತ್ರಜ್ಞಾನ ಸೌಲಭ್ಯ ಕಲ್ಪಿಸುವ ಸಾಮರ್ಥ್ಯ ಹೊಂದಿದ್ದೇವೆ. ಪ್ರಾದೇಶಿಕ ವಲಯಗಳಲ್ಲೂ ಸೇವೆ ಒದಗಿಸಲು ಬದ್ಧ’ ಎಂದು ನಾದೆಲ್ಲಾ ಹೇಳಿದರು.
ಕಳೆದ ವರ್ಷದ ಫೆಬ್ರುವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ 2025ರೊಳಗೆ ತಂತ್ರಜ್ಞಾನ ವಲಯದ 20 ಲಕ್ಷ ಜನರಿಗೆ ಎ.ಐ ಕೌಶಲ ತರಬೇತಿ ನೀಡುವುದಾಗಿ ಘೋಷಿಸಿದ್ದರು. ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ತರಬೇತಿ ನೀಡುವುದಾಗಿ ಘೋಷಿಸಿದ್ದರು.
ನಾದೆಲ್ಲಾ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಭಾರತದಲ್ಲಿ ಎ.ಐ ಮಿಷನ್ ಅನುಷ್ಠಾನ ಕುರಿತು ಮೋದಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.