ADVERTISEMENT

ಹೊಸ ತಲೆಮಾರಿನವರ ಆರ್ಥಿಕ ಭವಿಷ್ಯ

ಅಲೋಕ್‌ ಭಾನ್‌
Published 3 ಜೂನ್ 2020, 3:06 IST
Last Updated 3 ಜೂನ್ 2020, 3:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತವು ಜಗತ್ತಿನಲ್ಲೆ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಅವರಲ್ಲೂ ಹೆಚ್ಚಿನವರು ಹೊಸ ತಲೆಮಾರಿನವರು (1981–95ರ ಅವಧಿಯಲ್ಲಿ ಜನಿಸಿದವರು). ದೇಶದ ಶೇ 36ರಷ್ಟು (ಸುಮಾರು 42.6 ಕೋಟಿ) ಮಂದಿ ಈ ವರ್ಗದಲ್ಲಿದ್ದಾರೆ. ಅಮೆರಿಕ ಮತ್ತು ಚೀನಾದಲ್ಲಿ ಈ ವಯೋಮಾನದವರ ಸಂಖ್ಯೆಯು ಒಟ್ಟು ಜನಸಂಖ್ಯೆಯ ಕ್ರಮವಾಗಿ ಶೇ 21 ಮತ್ತು ಶೇ 17ರಷ್ಟಿದೆ. ಆದ್ದರಿಂದ, ಜೀವವಿಮೆಯೂ ಸೇರಿದಂತೆ ಭಾರತದಲ್ಲಿ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಈ ಸಮುದಾಯದ ಪಾಲು ಮಹತ್ವದ್ದಾಗಲಿದೆ.

‘ಜೀವವಿಮಾ ಉತ್ಪನ್ನಗಳನ್ನು ಖರೀದಿಸುವ ವಿಚಾರದಲ್ಲಿ ಹೊಸ ತಲೆಮಾರಿನಲ್ಲಿ ಸಕಾರಾತ್ಮಕವಾದ ಬದಲಾವಣೆ ಆಗಿದೆ’ ಎಂದು ಮ್ಯಾಕ್ಸ್‌ಲೈಫ್‌ ಸಂಸ್ಥೆ ನಡೆಸಿದ್ದ ‘ಇಂಡಿಯಾ ಪ್ರೊಟೆಕ್ಷನ್‌ ಕೋಷಿಯೆಂಟ್‌ 2.0’ (ಐಪಿಕ್ಯೂ 2.0) ಸಮೀಕ್ಷೆಯಿಂದ ತಿಳಿದುಬಂದಿದೆ. ಅವಧಿ ವಿಮೆ ಕುರಿತ ತಿಳಿವಳಿಕೆ ಹೆಚ್ಚಾಗಿದೆ. 12 ತಿಂಗಳ ಅವಧಿಯಲ್ಲಿ ಈ ಕುರಿತ ತಿಳಿವಳಿಕೆಯ ಪ್ರಮಾಣವು ಶೇ 45ರಿಂದ ಶೇ 56ಕ್ಕೆ ಏರಿಕೆಯಾಗಿದೆ. ಜತೆಗೆ ಅವಧಿ ವಿಮೆಗಳ ಖರೀದಿಯೂ ಶೇ 19ರಿಂದ ಶೇ 27ಕ್ಕೆ ಹೆಚ್ಚಿದೆ. ಹಿರಿಯ ತಲೆಮಾರಿನವರಲ್ಲೂ ತಿಳಿವಳಿಕೆ ಮತ್ತು ಖರೀದಿ ಪ್ರಮಾಣವು ಕಳೆದ ವರ್ಷಕ್ಕಿಂತ ಹೆಚ್ಚಾಗಿದ್ದರೂ, ಏರಿಕೆಯು ಶೇ 7 ಮತ್ತು ಶೇ 6ರಷ್ಟಿದೆ.

ಹೊಸ ತಲೆಮಾರಿನವರು ತಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮಹಾನಗರಗಳಲ್ಲಿ ವಾಸಿಸುವ ಶೇ 60ರಷ್ಟು ಯುವಕರು, ‘ಭವಿಷ್ಯಕ್ಕಾಗಿ ಸಾಕಷ್ಟು ಉಳಿತಾಯ ಮಾಡಲಾಗುತ್ತಿಲ್ಲ’ ಎಂಬ ಬಗ್ಗೆ ಚಿಂತೆಯಲ್ಲಿದ್ದಾರೆ. ಶೇ 61ರಷ್ಟು ಯುವಕರು, ‘ತಮಗೇನಾದರೂ ಸಂಭವಿಸಿದರೆ ಕುಟುಂಬದ ಪರಿಸ್ಥಿತಿ ಏನಾಗಬಹುದು’ ಎಂದು ಚಿಂತಿತರಾಗಿದ್ದಾರೆ. ಶೇ 62ರಷ್ಟು ಮಂದಿ ‘ನನಗೇನಾದರೂ ಗಂಭೀರ ಕಾಯಿಲೆ ಬಂದರೆ ಚಿಕಿತ್ಸೆಗೆ ಬೇಕಾದಷ್ಟು ಹಣ ಇಲ್ಲ’ ಎಂಬ ಆತಂಕದಲ್ಲಿದ್ದಾರೆ.

ADVERTISEMENT

ಇವರಲ್ಲಿ ಮೊದಲ ವರ್ಗದವರು, ಈಗ ಇರುವ ಗಳಿಕೆಯಲ್ಲೇ ಪ್ರಸಕ್ತ ಜೀವನ ಮಟ್ಟವನ್ನು ಉಳಿಸಿಕೊಳ್ಳುವುದು ಮತ್ತು ವೆಚ್ಚವನ್ನು ನಿರ್ವಹಿಸುವುದು ಹೇಗೆ ಎಂಬ ಬಗ್ಗೆ ಅತಿ ಹೆಚ್ಚು ಆತಂಕ ಹೊಂದಿದ್ದಾರೆ. ಉಳಿದೆರಡು ವರ್ಗದವರ ಬಹುದೊಡ್ಡ ಚಿಂತೆಯೆಂದರೆ, ‘ಗಳಿಸುವವನು ಇಲ್ಲವಾದರೆ ಕುಟುಂಬದ ಸ್ಥಿತಿ ಏನಾಗಬಹುದು’ ಎಂಬುದಾಗಿದೆ. ಆರ್ಥಿಕ ಭವಿಷ್ಯದ ಬಗೆಗಿನ ಈ ಆತಂಕವನ್ನು ಸಕಾರಾತ್ಮಕ ಬೆಳವಣಿಗೆ ಎಂದು ಗುರುತಿಸಬಹುದಾಗಿದೆ. ಇದರ ಪರಿಣಾಮವಾಗಿ ಈ ಸಮುದಾಯದವರು ಭವಿಷ್ಯದ ಆರ್ಥಿಕ ಭದ್ರತೆಗಾಗಿ ಯೋಚಿಸಿ ಹೆಜ್ಜೆಗಳನ್ನಿಡುತ್ತಾರೆ.

ಜೀವವಿಮಾ ಉತ್ಪನ್ನಗಳಿಗಾಗಿ ಈ ಹೊಸ ತಲೆಮಾರಿನವರು ನಡೆಸುವ ಹುಡುಕಾಟವೂ ವಿಶಿಷ್ಟವಾದುದು ಎಂದು ಐಪಿಕ್ಯೂ 2.0 ಸಮೀಕ್ಷೆ ಹೇಳುತ್ತದೆ. ಹೊಸ ತಲೆಮಾರಿನ ಶೇ 33ರಷ್ಟು ಮಂದಿ ಹಾಗೂ ಇತರರಲ್ಲಿ ಶೇ 21ರಷ್ಟು ಮಂದಿ ಆನ್‌ಲೈನ್‌ ಮೂಲಕ ಮಾಹಿತಿ ಪಡೆಯಲು ಬಯಸುತ್ತಾರೆ. ವಿಶೇಷವೆಂದರೆ ಹೊಸ ತಲೆಮಾರಿನ ಶೇ 67ರಷ್ಟು ಮಂದಿ ಹಾಗೂ ಇತರರಲ್ಲಿ ಶೇ 79ರಷ್ಟು ಮಂದಿ ಆಫ್‌ಲೈನ್‌ ಮೂಲಕ ಮಾಹಿತಿ ಪಡೆಯುತ್ತಾರೆ.

ಇದರಲ್ಲೂ ಶೇ 27ರಷ್ಟು ಮಹಿಳೆಯರು ಮತ್ತು ಶೇ 29ರಷ್ಟು ಪುರುಷರು ಆನ್‌ಲೈನ್‌ ಮೂಲಕ ಮಾಹಿತಿ ಪಡೆಯುತ್ತಾರೆ. ಆಫ್‌ಲೈನ್‌ನಲ್ಲಿ ಇವರ ಮಾಹಿತಿ ಹುಡುಕಾಟವು ಕ್ರಮವಾಗಿ ಶೇ 73 ಹಾಗೂ ಶೇ 71ರಷ್ಟಿದೆ.

ಜೀವವಿಮಾ ಉತ್ಪನ್ನಗಳನ್ನು ಕುರಿತ ಯುವ ಸಮುದಾಯದ ಬೇಡಿಕೆಗಳು ಸಾಕಷ್ಟು ಬದಲಾಗಿವೆ. ತಮ್ಮ ಪಾಲಿಸಿಯ ವಿಶೇಷತೆಗಳ ಬಗ್ಗೆ ಅವರು ಜಾಗೃತರಾಗಿದ್ದಾರೆ. ಅವಧಿ ಜೀವವಿಮೆಯನ್ನು ಖರೀದಿಸುವ ಶೇ 51ರಷ್ಟು, ಅಂದರೆ ಅರ್ಧಕ್ಕಿಂತಲೂ ಹೆಚ್ಚು ಮಂದಿ ಯುವಕರು, ವಿಮೆಯು ತಮಗೆ ನೀಡುತ್ತಿರುವ ಭದ್ರತೆ ಕಡಿಮೆ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಹೊಸ ತಲೆಮಾರಿನವರ ಬದಲಾಗುತ್ತಿರುವ ಆದ್ಯತೆಗಳ ಹಿನ್ನೆಲೆಯಲ್ಲಿ ವಿಮಾ ಕಂಪನಿಗಳು ಹೊಸತನದ ಉತ್ಪನ್ನಗಳನ್ನು ನೀಡಬೇಕಾಗಿದೆ.

(ಲೇಖಕ: ಮ್ಯಾಕ್ಸ್‌ ಲೈಫ್‌ ಇನ್ಶುರೆನ್ಸ್‌ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.