ADVERTISEMENT

ಮೊಬೈಲ್‌ ದತ್ತಾಂಶ ಸುರಕ್ಷತೆಗೆ ಸಲಹೆ

ಇಂದು ‘ಸುರಕ್ಷಿತ ಇಂಟರ್‌ನೆಟ್‌ ದಿನ’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 19:45 IST
Last Updated 4 ಫೆಬ್ರುವರಿ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಂದು (ಫೆ. 5) ‘ಸುರಕ್ಷಿತ ಅಂತರ್ಜಾಲ ದಿನ’ ಎಂದು ಆಚರಿಸಲಾಗುತ್ತಿದ್ದು, ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ನ ಸುರಕ್ಷಿತ ಬಳಕೆ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ನೋಡಿಕೊಳ್ಳಲು ಗೂಗಲ್‌ ಇಂಡಿಯಾ ಹತ್ತಾರು ಸಲಹೆಗಳನ್ನು ನೀಡಿದೆ.

ಮೊಬೈಲ್‌ಗಳಲ್ಲಿ ಆಂಡ್ರಾಯ್ಡ್‌ ಕಿರುತಂತ್ರಾಂಶ ಬಳಸುತ್ತಿದ್ದರೆ ಆ್ಯಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಗೂಗಲ್‌ ಪ್ಲೇ ಪ್ರೊಟೆಕ್ಟ್‌, ಮೊಬೈಲ್‌ಗೆ ದಿನದ 24 ಗಂಟೆಗಳ ಕಾಲ ಸುರಕ್ಷತೆ ಒದಗಿಸುತ್ತದೆ. ಇದು ಪ್ರತಿ ದಿನ 5000 ಕೋಟಿಗಳಷ್ಟು ಆ್ಯಪ್‌ಗಳನ್ನು ಸ್ಕ್ಯಾನ್‌ ಮಾಡಿ, ಅಪಾಯಕಾರಿಯಾದ ಆ್ಯಪ್‌ಗಳನ್ನು ಗುರುತಿಸಿ, ಮೊಬೈಲ್‌ನಿಂದ ಹೊರ ಹಾಕುತ್ತದೆ.

ರಹಸ್ಯ ಸಂಖ್ಯೆ ಅಥವಾ ವಿಭಿನ್ನ ಮಾದರಿಯ ವಿನ್ಯಾಸಗಳ ಮೂಲಕ ಮೊಬೈಲ್‌ ಪರದೆಯನ್ನು ಇತರರು ಸುಲಭವಾಗಿ ವೀಕ್ಷಿಸದಂತೆ ನಿರ್ಬಂಧಿಸಬೇಕು. ಮೊಬೈಲ್‌ ಅನ್ನು ಗೂಗಲ್‌ ಖಾತೆಗೆ ಸೇರ್ಪಡೆ ಮಾಡಿದ್ದರೆ ಮೊಬೈಲ್‌ ಕಳೆದು ಹೋದಾಗ ಇಲ್ಲವೆ ಕಳ್ಳತನ ನಡೆದಾಗ ಪತ್ತೆಹಚ್ಚಬಹುದು. ಅದರಲ್ಲಿನ ಮಾಹಿತಿಯನ್ನೂ ನಾಶಮಾಡಬಹುದು ಎಂದು ಗೂಗಲ್‌ ಇಂಡಿಯಾದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ವಿಭಾಗದ ನಿರ್ದೇಶಕಿ ಸುನೀತಾ ಮೊಹಂತಿ ಹೇಳಿದ್ದಾರೆ.

ADVERTISEMENT

ಡೌನ್‌ಲೋಡ್‌ ಮಾಡಿಕೊಂಡಿರುವ ಥರ್ಡ್‌ಪಾರ್ಟಿ ಆ್ಯಪ್‌ಗಳಿಗೆ, ವೈಯಕ್ತಿಕ ಸಂಪರ್ಕ ವಿವರ, ಕ್ಯಾಮೆರಾ, ಕ್ಯಾಲೆಂಡರ್‌ನ ಮಾಹಿತಿ ಪಡೆಯಲು ಅನುಮತಿ ನೀಡಿರುವುದರ ಬಗ್ಗೆ ನಿಗಾವಹಿಸಿ ಅನಗತ್ಯವಾಗಿ ಅನುಮತಿ ಕೊಟ್ಟಿದ್ದರೆ ಅವುಗಳನ್ನು ನಾಶಪಡಿಸಿ.

ವ್ಯಕ್ತಿಗಳು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ದತ್ತಾಂಶಗಳ ಸುರಕ್ಷತೆಗಾಗಿ ತಮ್ಮ ಗೂಗಲ್ ಖಾತೆಯ ಆರೋಗ್ಯ ತಪಾಸಣೆ ನಡೆಸಲು ಮರೆಯಬಾರದು. ಪ್ರತಿಯೊಂದು ಖಾತೆಗೂ ಪ್ರತ್ಯೇಕ ಪಾಸ್‌ವರ್ಡ್‌ ಬಳಸಬೇಕು.

ಆನ್‌ಲೈನ್‌ ಚಟುವಟಿಕೆಗಳ ಸುರಕ್ಷತೆಗಾಗಿ ನೀವು ಬಳಸುವ ಡಿಜಿಟಲ್‌ ಸಾಧನಗಳಲ್ಲಿ ನವೀಕೃತ ಸಾಫ್ಟ್‌ವೇರ್‌ ಬಳಕೆ ಬಗ್ಗೆ ನಿಗಾ ಇರಿಸಿ. ಅಂತರ್ಜಾಲದ ವಿಳಾಸವು https:// ದಿಂದ ಆರಂಭಗೊಂಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು.

ಮಾಹಿತಿ ಹಂಚಿಕೊಳ್ಳಬೇಡಿ: ಮೋಸದ ಉದ್ದೇಶದ ಅನಾಮಧೇಯ ಇ–ಮೇಲ್‌, ಮೊಬೈಲ್‌ ಕರೆಗಳಿಗೆ ‍ ಪ್ರತಿಕ್ರಿಯಿಸಬೇಡಿ. ವೈಯಕ್ತಿಕ ಮಾಹಿತಿಯನ್ನು ಯಾರೊಬ್ಬರಿಗೂ ನೀಡಬೇಡಿ. ಅಧಿಕೃತ ಅಂತರ್ಜಾಲ ತಾಣಗಳಿಂದ ಯಾವತ್ತೂ ಇಂತಹ ಕರೆಗಳು ಬರುವುದಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಡಿ.

‘ಆನ್‌ಲೈನ್‌ ಸುರಕ್ಷತೆ ಬಗ್ಗೆ ಮಕ್ಕಳಲ್ಲಿ ತಪ್ಪದೇ ಅರಿವು ಮೂಡಿಸಿ. ಅನುಮಾನ ಬಂದಾಗ ಕುಟುಂಬದ ಹಿರಿಯರನ್ನು ಸಂಪರ್ಕಿಸಲು ತಾಕೀತು ಮಾಡಬೇಕು’ ಎಂದೂ ಸುನೀತಾ ಮೊಹಂತಿ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.