ADVERTISEMENT

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ₹762 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:00 IST
Last Updated 4 ಜೂನ್ 2019, 20:00 IST
   

ಬಳ್ಳಾರಿ: ‘ಕರ್ನಾಟಕ ಗ್ರಾಮೀಣ ಬ್ಯಾಂಕ್‌, 2018–19ನೇ ಸಾಲಿನಲ್ಲಿ ₹762 ಕೋಟಿ ಒಟ್ಟು ಲಾಭ ಗಳಿಸಿದ್ದು, ದೇಶದ ಗ್ರಾಮೀಣ ಬ್ಯಾಂಕುಗಳ ಪೈಕಿ ಕನಿಷ್ಠ 3ನೇ ಸ್ಥಾನ ಪಡೆಯುವ ನಿರೀಕ್ಷೆ ಇದೆ’ ಎಂದು ಬ್ಯಾಂಕ್‌ ಅಧ್ಯಕ್ಷ ಶ್ರೀನಾಥ್‌ ಎಚ್‌.ಜೋಷಿ ತಿಳಿಸಿದರು.

ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕಿನ ಒಟ್ಟು ನಿವ್ವಳ ಲಾಭ, ತೆರಿಗೆ ಮೊತ್ತವನ್ನು ಕಳೆದ ನಂತರ ₹112 ಕೋಟಿ ಇದೆ. ಸಾಲ ಮತ್ತು ಠೇವಣಿ ಅನುಪಾತವು ಶೇ 83.61ರಷ್ಟು ಮುಟ್ಟಿರುವುದು ಕೂಡ ದಾಖಲೆಯೇ ಆಗಿದೆ’ ಎಂದು ತಿಳಿಸಿದರು.

‘21 ಜಿಲ್ಲೆ, 19 ಪ್ರಾದೇಶಿಕ ಕಚೇರಿ ಹಾಗೂ 1,167 ಶಾಖೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ ₹46,700 ಕೋಟಿ ವ್ಯವಹಾರ ನಡೆಸಿದೆ. ₹25,435 ಕೋಟಿ ಠೇವಣಿ ಹೊಂದಿದೆ. ₹21,265 ಕೋಟಿ ಸಾಲ ಕೊಟ್ಟಿದೆ’ ಎಂದು ವಿವರಿಸಿದರು.

ADVERTISEMENT

‘₹2,039 ಕೋಟಿ ಸ್ವಂತ ನಿಧಿ, ₹1,921 ಕೋಟಿ ಮೀಸಲು ನಿಧಿ ಹಾಗೂ ₹118 ಕೋಟಿ ಬಂಡವಾಳ ನಿಧಿಯನ್ನು ಹೊಂದಿರುವ ಬ್ಯಾಂಕ್‌, ಸಣ್ಣ, ಕಿರು ಉದ್ದಿಮೆಗಳಿಗೆ ₹2,124 ಕೋಟಿ ಸಾಲ ನೀಡಿದೆ. ಪ್ರಸಕ್ತ ವರ್ಷದಲ್ಲಿ 45,106 ರೈತರಿಗೆ ಹೊಸದಾಗಿ ಸಾಲ ನೀಡುವ ಉದ್ದೇಶವೂ ಹೊಂದಿದೆ’ ಎಂದರು.

‘ಒಟ್ಟು 31,785 ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಿ ₹304 ಕೋಟಿ ಸಾಲ ವಿತರಿಸಲಾಗಿದೆ. 87,709 ಸ್ವಸಹಾಯ ಸಂಘಗಳಿಗೆ ₹1,731 ಕೋಟಿ ಸಾಲ ನೀಡಲಾಗಿದೆ’ ಎಂದು ತಿಳಿಸಿದರು.

ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಎನ್‌.ಜಿ.ಶೈಲೇಂದ್ರ ಉಡುಪ, ಬಿ.ಜಿ.ಮಂಜುನಾಥ, ಪ್ರದೀಪ್‌ಕುಮಾರ್‌ ವರ್ಮ ಮತ್ತು ಎಸ್‌ಜೆಎಫ್‌ ರವೀಂದ್ರನಾಥ್ ಇದ್ದರು.

ಡೆಲ್‌, ಎಲ್‌ಐಸಿ ವಿಶ್ವಾಸಾರ್ಹ ಬ್ರ್ಯಾಂಡ್‌: ಟಿಆರ್‌ಎ ವರದಿ

ನವದೆಹಲಿ (ಪಿಟಿಐ): ಕಂಪ್ಯೂಟರ್‌, ಲ್ಯಾಪ್‌ಟಾಪ್‌ ತಯಾರಿಸುವ ಬಹುರಾಷ್ಟ್ರೀಯ ಸಂಸ್ಥೆ ಡೆಲ್‌, ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಂತರದ ಸ್ಥಾನದಲ್ಲಿ ವಾಹನ ತಯಾರಿಕಾ ಸಂಸ್ಥೆ ಜೀಪ್‌ ಮತ್ತು ಜೀವ ವಿಮಾ ಸಂಸ್ಥೆ ಎಲ್‌ಐಸಿ ಇವೆ. ಮುಂಚೂಣಿ ಏಳು ಜಾಗತಿಕ ವಿಶ್ವಾಸಾರ್ಹ ಬ್ರ್ಯಾಂಡ್‌ಗಳ ಸಾಲಿನಲ್ಲಿ ಎಲ್‌ಐಸಿ ಒಂದೇ ಭಾರತದ ಸಂಸ್ಥೆಯಾಗಿದೆ. ಟಿಆರ್‌ಎ ಬ್ರ್ಯಾಂಡ್‌ ವಿಶ್ವಾಸಾರ್ಹತೆ ವರದಿಯಲ್ಲಿ ಈ ವಿವರಗಳಿವೆ.

ಅಮೆಜಾನ್‌ ಮತ್ತು ಆ್ಯಪಲ್‌ನ ಐಫೋನ್‌ ಕ್ರಮವಾಗಿ ನಾಲ್ಕು ಮತ್ತು ಐದನೆ ಸ್ಥಾನದಲ್ಲಿವೆ. ದಕ್ಷಿಣ ಕೊರಿಯಾದ ಮೊಬೈಲ್‌ ತಯಾರಿಕಾ ಸಂಸ್ಥೆ ಸ್ಯಾಮ್ಸಂಗ್‌ ಮತ್ತು ಎಲ್‌ಜಿ ಟೆಲಿವಿಷನ್‌ 5 ಮತ್ತು 6ನೆ ಸ್ಥಾನದಲ್ಲಿವೆ.

ಅವಿವಾ ಲೈಫ್ ಇನ್ಶೂರೆನ್ಸ್‌, ಮಾರುತಿ ಸುಜುಕಿ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಕ್ರಮವಾಗಿ 8, 9 ಮತ್ತು 10ನೆ ಸ್ಥಾನದಲ್ಲಿ ಇವೆ. ದೇಶದ ಅತ್ಯಂತ ವಿಶ್ವಾಸಾರ್ಹವಾದ 1,000 ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಟಾಟಾ ಸಮೂಹದ 23 ಬ್ರ್ಯಾಂಡ್‌ಗಳು ಸ್ಥಾನ ಪಡೆದಿವೆ. ನಂತರದ ಸ್ಥಾನದಲ್ಲಿ ಗೋದ್ರೇಜ್‌ನ 15, ಅಮುಲ್‌ನ 11 ಬ್ರ್ಯಾಂಡ್‌ಗಳಿವೆ.

ಟಿಆರ್‌ಎ ರಿಸರ್ಚ್‌ ಸಂಸ್ಥೆಯು ದೇಶದ 16 ಮಹಾನಗರಗಳ 2,315 ಜನರ ಅಭಿಪ್ರಾಯ ಆಧರಿಸಿ ವರದಿ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.