ADVERTISEMENT

ಎಂಆರ್‌ಪಿಎಲ್‌ಗೆ ₹387 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 18:21 IST
Last Updated 22 ಜನವರಿ 2024, 18:21 IST

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) 2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹387 ಕೋಟಿ ಲಾಭ ಗಳಿಸಿದೆ.

ಕಳೆದ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು ತೆರಿಗೆ ಕಳೆದು ₹188 ಕೋಟಿ ನಷ್ಟ ಅನುಭವಿಸಿತ್ತು. ಹಣಕಾಸು ವರ್ಷದ ಒಂಬತ್ತು ತಿಂಗಳುಗಳಲ್ಲಿ ಕಂಪನಿಯು ₹2,459 ಕೋಟಿ (ತೆರಿಗೆ ಕಳೆದು) ಲಾಭ ಗಳಿಸಿದೆ. ಕಳೆದ ಸಾಲಿನಲ್ಲಿ ಈ ಅವಧಿಯಲ್ಲಿ ₹730 ಕೋಟಿ ಲಾಭ ಗಳಿಸಿತ್ತು.

ಈ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ವರಮಾನವು ಕುಸಿದಿದೆ. ಕಂಪನಿಯು ಕಾರ್ಯಾಚರಣೆಯಿಂದ ಒಟ್ಟು ₹28,383 ಕೋಟಿ ಗಳಿಸಿದೆ. 2022–23ನೇ ಸಾಲಿನಡಿ ಇದೇ ಅವಧಿಯಲ್ಲಿ ₹30,966 ಕೋಟಿ ವರಮಾನ ಗಳಿಸಿತ್ತು.

ADVERTISEMENT

ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ ಕಂಪನಿಯು ಕಾರ್ಯಾಚರಣೆಯಿಂದ ಒಟ್ಟು ₹76,060 ಕೋಟಿ ವರಮಾನ ಗಳಿಸಿದೆ. 2022–23ನೇ ಸಾಲಿನಲ್ಲಿ ಈ ಅವಧಿಯಲ್ಲಿ ₹95,335 ಕೋಟಿ ವರಮಾನ ಗಳಿಸಿತ್ತು.

ಮೂರನೇ ತ್ರೈಮಾಸಿಕ ಮತ್ತು ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳ ಲೆಕ್ಕಪರಿಶೋಧನೆಗೆ ಒಳಪಡದ ಆರ್ಥಿಕ ಫಲಿತಾಂಶಗಳಿಗೆ ಸೋಮವಾರ ನಡೆದ ಕಂಪನಿಯ ಆಡಳಿತ ಮಂಡಳಿಯ 260ನೇ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕಂಪನಿಯು 2023ರ ಡಿಸೆಂಬರ್‌ನಲ್ಲಿ 15.58 ಲಕ್ಷ ಟನ್‌ ಕಚ್ಚಾತೈಲವನ್ನು ನಿರ್ವಹಣೆ ಮಾಡಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. 2016ರ ಜನವರಿಯಲ್ಲಿ 15.57 ಲಕ್ಷ ಟನ್‌ ಕಚ್ಚಾತೈಲ ನಿರ್ವಹಣೆ ಮಾಡಿದ್ದು, ಇದುವರೆಗಿನ ದಾಖಲೆಯಾಗಿತ್ತು. ನವೆಂಬರ್‌ನಲ್ಲಿ 14.99 ಲಕ್ಷ ಟನ್‌ ಕಚ್ಚಾತೈಲವನ್ನು ನಿರ್ವಹಣೆ ಮಾಡಿತ್ತು.

ಎಂಆರ್‌ಪಿಎಲ್‌ ಮೊದಲ ಬಾರಿಗೆ 20 ಸಾವಿರ ಟನ್‌ಗಳಷ್ಟು ಸಲ್ಫರ್‌ ಇಂಧನ ತೈಲವನ್ನು ಖರೀದಿಸಿ ಸಂಸ್ಕರಿಸಿದೆ. ಕಂಪನಿಯು ಏರೊಮ್ಯಾಟಿಕ್‌ ಸಂಕೀರ್ಣವನ್ನು 20 ದಿನಗಳವರೆಗೆ ಪ್ಯಾರಾಕ್ಸೈಲೀನ್‌ ತಯಾರಿಕೆಗೆ ಬಳಸಿಕೊಳ್ಳಲಾಗಿದ್ದು, ಒಟ್ಟು 20 ಸಾವಿರ ಟನ್‌ಗಳಷ್ಟು ಪ್ಯಾರಾಕ್ಸೈಲೀನ್‌ ರಫ್ತು ಮಾಡಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.