ADVERTISEMENT

‘ಎಂಎಸ್‌ಎಂಇ’ಗೆ ₹15 ಸಾವಿರ ಕೋಟಿ

ಆರ್‌ಬಿಐ ನೇಮಿಸಿದ್ದ ಸಿನ್ಹಾ ಸಮಿತಿ ಶಿಫಾರಸು

ಏಜೆನ್ಸೀಸ್
Published 26 ಜೂನ್ 2019, 19:45 IST
Last Updated 26 ಜೂನ್ 2019, 19:45 IST
   

ಮುಂಬೈ (ಪಿಟಿಐ): ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಉದ್ದಿಮೆಗಳಿಗೆ ₹ 15 ಸಾವಿರ ಕೋಟಿಗಳ ಹಣಕಾಸು ನೆರವು ನೀಡಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ನೇಮಿಸಿದ್ದ ಯು. ಕೆ. ಸಿನ್ಹಾ ಸಮಿತಿಯು ಶಿಫಾರಸು ಮಾಡಿದೆ.

ಹೊಸ ಉದ್ಯೋಗ ಸೃಷ್ಟಿಗೆ ಗಮನಾರ್ಹ ಕೊಡುಗೆ ನೀಡುತ್ತಿರುವ ಮತ್ತು ರಫ್ತು ವಹಿವಾಟಿನಲ್ಲಿ ಶೇ 40ಕ್ಕಿಂತ ಹೆಚ್ಚಿನ ಪಾಲು ಹೊಂದಿರುವ ಈ ವಲಯವು ಸದ್ಯಕ್ಕೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇದರಿಂದ ಈ ವಲಯದ ಪ್ರಗತಿ ನಿಧಾನಗೊಂಡಿದೆ ಎಂದು 9 ಸದಸ್ಯರ ಸಮಿತಿಯು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಎಂಎಸ್‌ಎಂಇ ವಲಯದ ಆರ್ಥಿಕ ಮತ್ತು ಹಣಕಾಸು ಸುಸ್ಥಿರತೆಗಾಗಿ ದೀರ್ಘಾವಧಿ ಕಾರ್ಯಕ್ರಮಗಳನ್ನು ಸೂಚಿಸಲು ಆರ್‌ಬಿಐ, ಡಿಸೆಂಬರ್‌ನಲ್ಲಿ ಈ ಸಮಿತಿ ರಚಿಸಿತ್ತು.

ADVERTISEMENT

ಈ ವಲಯದಲ್ಲಿ ಖಾಸಗಿ ಸಂಸ್ಥೆಗಳು ಮತ್ತು ಬಂಡವಾಳ ಹೂಡಿಕೆದಾರರು ಹಣ ತೊಡಗಿಸುವುದಕ್ಕೆ ಬೆಂಬಲ ನೀಡಲು ಸರ್ಕಾರದ ನೆರವಿನ ₹ 10ಸಾವಿರ ಕೋಟಿಗಳ ‘ನಿಧಿಗಳ ನಿಧಿ’ ಸ್ಥಾಪಿಸಬೇಕು. ನಷ್ಟಪೀಡಿತ ಉದ್ದಿಮೆಗಳಿಗೆ ನೆರವಾಗಲು ₹ 500 ಕೋಟಿಗಳ ಪ್ರತ್ಯೇಕ ನಿಧಿ ರಚಿಸಲು ಸಮಿತಿಯು ಶಿಫಾರಸು ಮಾಡಿದೆ. ಪ್ಲಾಸ್ಟಿಕ್‌ ನಿಷೇಧದಂತಹ ಕಾರಣಗಳಿಗೆ ನಷ್ಟಕ್ಕೆ ಗುರಿಯಾಗಿರುವ ಉದ್ದಿಮೆಗಳಿಗೆ ಈ ನಿಧಿಯ ಮೂಲಕ ನೆರವಾಗಬೇಕು. ನಷ್ಟಪೀಡಿತ ಕೈಗಾರಿಕಾ ಘಟಕಗಳ ಪುನಶ್ಚೇತನಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಲಾಗಿದೆ.

ಕೈಗಾರಿಕಾ ವಸಾಹತುಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಹೊಸ ಕೈಗಾರಿಕಾ ಎಸ್ಟೇಟ್‌ಗಳ ಸ್ಥಾಪನೆಗೆ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ ರಾಜ್ಯಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಬೇಕು.

‘ಎಂಎಸ್‌ಎಂಇ’ಗಳಿಗೆ ಹಣಕಾಸು ನೆರವು ನೀಡುವ ಮತ್ತು ಅಭಿವೃದ್ಧಿಗೆ ನೆರವಾಗುವ ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌, (ಎಸ್‌ಐಡಿಬಿಐ) ಈ ವಲಯದ ಅಭಿವೃದ್ಧಿ ಉದ್ದೇಶಕ್ಕೆ ರಾಜ್ಯ ಸರ್ಕಾರಗಳ ಜತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದೂ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.