ADVERTISEMENT

‘ಎಂಎಸ್‌ಎಂಇ’ ಸಲಹೆ | ಯೋಜನಾ ವರದಿ ತೃಪ್ತಿಕರವಾಗಿಲ್ಲ: ಗೊಂದಲಕ್ಕೆ ಪರಿಹಾರವೇನು?

ಮದನ್ ಪದಕಿ
Published 8 ಜುಲೈ 2020, 2:57 IST
Last Updated 8 ಜುಲೈ 2020, 2:57 IST
ಮದನ್‌ ಪದಕಿ
ಮದನ್‌ ಪದಕಿ   

ಪ್ರಶ್ನೆ: ನಾರಿನ ವಿನೀರ್ ಬೋರ್ಡ್‌ಗಳನ್ನು ತಯಾರು ಮಾಡುವ ಹೊಸ ಕೈಗಾರಿಕೆಯನ್ನು ಸ್ಥಾಪಿಸುವ ಉದ್ದೇಶವನ್ನು ನಾನು ಹೊಂದಿದ್ದೇನೆ. ನಾನು ಯೋಜನಾ ವರದಿಯನ್ನು ತಯಾರು ಮಾಡಿರುತ್ತೇನೆ. ಆದರೆ ಈ ವರದಿಯು ತೃಪ್ತಿಕರವಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಪರಿಣತರೊಬ್ಬರಿಂದ ನನ್ನ ಯೋಜನಾ ವರದಿಯನ್ನು ಪರಿಶೀಲಿಸಿಕೊಳ್ಳಲು ಯಾರ ಬಳಿ ತೆರಳಬೇಕು ಎಂದು ದಯಮಾಡಿ ನನಗೆ ತಿಳಿಸಿರಿ.
–ನಾಗೇಶ್, ತುಮಕೂರು

ಉತ್ತರ: ಇಂಡಿಯನ್ ಪ್ಲೈವುಡ್ ಇಂಡಸ್ಟ್ರೀಸ್ ರಿಸರ್ಚ್ ಮತ್ತು ಟ್ರೈನಿಂಗ್ ಸೆಂಟರ್, ಬೆಂಗಳೂರು –ಈ ಸಂಸ್ಥೆಯು ತರಬೇತಿ ಮತ್ತು ಸಮಾಲೋಚನೆಯ ಸೇವೆಗಳನ್ನು ಒದಗಿಸುತ್ತದೆ. ಈ ಸಂಸ್ಥೆಯ ಜಾಲತಾಣ: http://www.ipirti.gov.in ಈ ಸಂಸ್ಥೆಯು ನಿಮ್ಮನ್ನು ಸೂಕ್ತ ಪರಿಣತರೊಂದಿಗೆ ಸಂಪರ್ಕಿಸಬಹುದು.


ಪ್ರಶ್ನೆ: ನಾನು ಮತ್ತು ನನ್ನ ಸಹೋದರ ಜೊತೆಗೂಡಿ ಕೋಲ್ಡ್ ಪ್ರೆಸ್ಡ್ ತೆಂಗಿನಕಾಯಿ ಎಣ್ಣೆಯನ್ನು ತಯಾರು ಮಾಡುವ ಉದ್ಯಮವನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದೇನೆ. ಕರ್ನಾಟಕ ಮತ್ತು ಕೇರಳದಲ್ಲಿ ಒಂದೊಂದು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದೇವೆ. ಆದರೆ ನಮ್ಮ ಕಂಪನಿಯನ್ನು ಯಾವ ರಾಜ್ಯದಲ್ಲಿ ನೋಂದಾಯಿಸಬೇಕೆಂಬುದರ ಕುರಿತು ನಾವು ಗೊಂದಲದಲ್ಲಿದ್ದೇವೆ. ದಯವಿಟ್ಟು ಮಾರ್ಗದರ್ಶನ ನೀಡಿ.

ADVERTISEMENT

–ಉಮೇಶ್, ಮೈಸೂರು

ಉತ್ತರ:ಒಬ್ಬ ಅರ್ಜಿದಾರರು ಒಂದಕ್ಕಿಂತ ಹೆಚ್ಚಿನ ಸಂಸ್ಥೆಗಳನ್ನು ಹೊಂದಬಹುದಾಗಿದೆ. ಪ್ರತಿಯೊಂದನ್ನು ಬೇರೆ ಬೇರೆಯಾಗಿಯೇ ಉದ್ಯೋಗ್ ಆಧಾರ್‌ಗೆ ನೋಂದಣಿ ಮಾಡಿಸಬಹುದು. ಅಥವಾ ಘಟಕ-1 ಮತ್ತು ಘಟಕ 2ಕ್ಕೆ ಒಂದೇ ಉದ್ಯೋಗ್ ಆಧಾರ್ ಸಂಖ್ಯೆ ಪಡೆಯಬಹುದಾಗಿದೆ. ಒಂದೇ ಉದ್ಯೋಗ್ ಆಧಾರ್ ಸಂಖ್ಯೆ ಹೊಂದಿದ್ದಲ್ಲಿ, ಎರಡೂ ಘಟಕಗಳಿಗೆ ಸೇರಿದಂತೆ ಒಂದೇ ಬ್ಯಾಲೆನ್ಸ್‌ಶೀಟ್ ಇರುತ್ತದೆ. ನೀವು ಸಾಮಾನ್ಯವಾಗಿ ಯಾವ ರಾಜ್ಯದಲ್ಲಿ ವಾಸವಾಗಿರುತ್ತೀರೋ ಆ ರಾಜ್ಯದಲ್ಲಿ ಕಂಪನಿಯನ್ನು ನೋಂದಣಿ ಮಾಡಿರಿ.

ಪ್ರಶ್ಮೆ: ನಾನು ಪೂರ್ವ ಪ್ರಾಥಮಿಕ ಶಾಲೆ ಮತ್ತು ಡೇ ಕೇರ್ ಸೆಂಟರ್ ನಡೆಸುತ್ತಿದ್ದೇನೆ. ಆದರೆ ಪ್ರಸ್ತುತ ನನ್ನ ಈ ವಹಿವಾಟು ನಷ್ಟದಲ್ಲಿದ್ದು, ನಾನು ನನ್ನ ಸಿಬ್ಬಂದಿಗೆ ಸಂಬಳ ನೀಡಲು ಮತ್ತು ಇನ್ನಿತರ ಸೇವೆ ಒದಗಿಸಿದವರಿಗೆ ಶುಲ್ಕ ಪಾವತಿಸಲು ಅಸಮರ್ಥಳಾಗಿದ್ದೇನೆ. ಮಾರುಕಟ್ಟೆಯಲ್ಲಿ ನಮ್ಮ ಸಂಸ್ಥೆ ಕುರಿತು ಹೆಚ್ಚಿನ ಮಾಹಿತಿ ಇಲ್ಲದಿರುವುದು ದೊಡ್ಡ ಸವಾಲಾಗಿದೆ. ನಮ್ಮ ಉದ್ಯಮವನ್ನು ಹೊಸ ದಿಕ್ಕಿನಲ್ಲಿ ನಡೆಸುವ ಅವಶ್ಯಕತೆ ಇದ್ದು, ಉತ್ತಮ ಸಿಬ್ಬಂದಿಯನ್ನೂ ಆಕರ್ಷಿಸಬೇಕಾಗಿದೆ. ಸಾಲ ಮರುಪಾವತಿಗಾಗಿ ಹಣದ ವ್ಯವಸ್ಥೆಯನ್ನೂ ಮಾಡಬೇಕಾಗಿದೆ. ನಮ್ಮ ಶಾಲೆಯು ಆಯಕಟ್ಟಿನ ಸ್ಥಳದಲ್ಲಿರುವುದು ನಮ್ಮ ಬಲವಾದರೂ, ಹಣದ ಕೊರತೆ ನಮ್ಮ ದೌರ್ಬಲ್ಯವಾಗಿ ಪರಿಣಮಿಸಿದೆ. ಹೆಚ್ಚಿನ ಜನಸಂಖ್ಯೆ ಇರುವ ಪ್ರದೇಶದಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದು, ಇತರೆ ಸಂಸ್ಥೆಗಳಿಂದ ಸ್ಪರ್ಧೆ ಮತ್ತು ಕೋವಿಡ್ -19 ನಾವು ಎದುರಿಸುತ್ತಿರುವ ಇತರೆ ಸವಾಲುಗಳಾಗಿವೆ.

–ರತ್ನ, ಬೆಂಗಳೂರು

ಉತ್ತರ: ಪೂರ್ವ ಪ್ರಾಥಮಿಕ ಮತ್ತು ಪ್ಲೇ ಸ್ಕೂಲ್‌ಗಳು ಲಾಭದಾಯಕ ವಹಿವಾಟು ಆಗಿವೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಬರುವ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ. ಪ್ರಿಸ್ಕೂಲ್ ಮತ್ತು ಪ್ಲೇ ಸ್ಕೂಲ್‌ಗಳ ಫ್ರಾಂಚೈಸಿ ನೀಡುವ ಸಂಸ್ಥೆಗಳು ನಿಮ್ಮಂತೆ ಆಯಕಟ್ಟಿನ ಸ್ಥಳದಲ್ಲಿ ಇರುವ ಶಾಲೆಗಳಿಗೆ ಆದ್ಯತೆ ನೀಡುತ್ತವೆ. ನಿಮ್ಮ ಬಿಸಿನೆಸ್ ಮಾಡೆಲ್ ಬದಲಾಯಿಸಲು ನೀವು ಫ್ರಾಂಚೈಸಿ ಅವಕಾಶಗಳನ್ನು ಹುಡುಕಿರಿ. ನೀವು ಬ್ಯಾಂಕಿನಿಂದ ಸಾಲ ಪಡೆದಿದ್ದಲ್ಲಿ ಮರುಪಾವತಿಯನ್ನು ಎಮರ್ಜೆನ್ಸಿ ಕ್ರೆಡಿಟ್‌ಲೈನ್ ಗ್ಯಾರಂಟಿ ಸ್ಕೀಂ ಅಡಿಯಲ್ಲಿ ಮರು ಹೊಂದಾಣಿಕೆ ಮಾಡಿಕೊಳ್ಳಿ. ಮೇಲಾಗಿ ಶೇಕಡಾ 20ರಷ್ಟು ಹೆಚ್ಚುವರಿ ಮೊತ್ತವನ್ನೂ ಸಾಲವಾಗಿ ಪಡೆಯಬಹುದು. ಯಾವುದೇ ಸೂಕ್ತ ವ್ಯಕ್ತಿಯನ್ನು ಪಾಲುದಾರನನ್ನಾಗಿಯೂ ಸೇರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.