ನವದೆಹಲಿ: ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳಿಗೆ ನೆರವು ನೀಡುವ ಉದ್ದೇಶದಿಂದ ಹೆಚ್ಚುವರಿಯಾಗಿ 20 ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
‘ಸುಧಾರಿತ ತಯಾರಿಕಾ ತಂತ್ರಜ್ಞಾನ, ಕೌಶಲವೃದ್ಧಿ, ತಾಂತ್ರಿಕ ಮತ್ತು ವಹಿವಾಟಿನ ಕುರಿತ ಸಲಹೆಗಳು ಈ ಕೇಂದ್ರಗಳಲ್ಲಿ ಲಭ್ಯವಾಗಲಿವೆ’ ಎಂದು ಎಂಎಸ್‌ಎಂಇ ಸಚಿವ ಗಿರಿರಾಜ್ ಸಿಂಗ್ ತಿಳಿಸಿದ್ದಾರೆ.
ಸಿಐಐನ ಜಾಗತಿಕ ಎಸ್‌ಎಂಇ ವಾಣಿಜ್ಯ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಸದ್ಯ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ 10 ಕೇಂದ್ರಗಳು ಕಾರ್ಯಾಚರಣೆ ನಡೆಸುತ್ತಿವೆ. ಇನ್ನೂ 20 ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ದೊರೆತಿದೆ’ ಎಂದು ವಿವರಿಸಿದ್ದಾರೆ.
‘ವಲಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ. ನಿಗದಿತ ಅವಧಿಗೆ ನಗದು ಲಭ್ಯವಾಗುವಂತೆಯೂ ಮಾಡಲಾಗುವುದು.
‘ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಹಾಗೂ ನಗದು ಖಾತರಿ ನಿಧಿ ಟ್ರಸ್ಟ್ ಯೋಜನೆಗಳಿಂದಾಗಿ ವಲಯದಿಂದ 19 ಲಕ್ಷ ಹೊಸ ಉದ್ಯಮಿಗಳು ಸೃಷ್ಟಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.