ADVERTISEMENT

ಕೈಗಾರಿಕೆಗಾಗಿ ಮತ್ತೆ ಭೂ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 19:45 IST
Last Updated 18 ಆಗಸ್ಟ್ 2021, 19:45 IST
ಮುರುಗೇಶ್‌ ಆರ್‌. ನಿರಾಣಿ
ಮುರುಗೇಶ್‌ ಆರ್‌. ನಿರಾಣಿ    

ಬೆಂಗಳೂರು: ‘ಭೂ ಬ್ಯಾಂಕ್‌’ ಪರಿಕಲ್ಪನೆಯನ್ನು ಮರು ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ’ ಎಂದು ಕೈಗಾರಿಕಾ ಸಚಿವ ಮುರುಗೇಶ್‌ ಆರ್‌. ನಿರಾಣಿ ತಿಳಿಸಿದರು.

‘ಪ್ರಜಾವಾಣಿ’ ಜೊತೆ ಬುಧವಾರ ಮಾತನಾಡಿದ ಅವರು, ‘ಹಲವು ಯೋಜನೆಗಳು ಭೂಮಿ ಸಿಗದೇ ಇರುವುದರಿಂದ ಆರಂಭವಾಗುವುದೇ ಇಲ್ಲ. ಹೀಗಾಗಿ, ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಭೂ ಬ್ಯಾಂಕ್‌ ಪರಿಕಲ್ಪನೆ ಅಗತ್ಯವಾಗಿದೆ’ ಎಂದು
ಪ್ರತಿಪಾದಿಸಿದರು.

‘ಈ ಹಿಂದೆ ನಾನು ಕೈಗಾರಿಕೆ ಸಚಿವನಾಗಿದ್ದಾಗ ಭೂ ಬ್ಯಾಂಕ್‌ ಯೋಜನೆ ಆರಂಭಿಸಿದ್ದೆ. ಅದನ್ನು ಮುಂದುವರಿಸಲು ನಾವು ಪ್ರಯತ್ನಿಸಿದರೂ, ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಮುಂದುವರಿಸಲಿಲ್ಲ. ಹಿಂದೆ, ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕಾಗಿ 1.25 ಲಕ್ಷ ಎಕರೆ ಕೃಷಿ ಮಾಡದ ಭೂಮಿಯನ್ನು ರೈತರಿಂದ ಸರ್ಕಾರ ಖರೀದಿಸಿತ್ತು’ ಎಂದರು.

ADVERTISEMENT

‘ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು, ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದೇ ಮೀಸಲಿಟ್ಟ ಭೂಮಿ ನಮ್ಮಲ್ಲಿ ಇರಬೇಕು. ಈ ಕಾರಣಕ್ಕೆ, ಲಭ್ಯ ಭೂಮಿಯ ಬಗ್ಗೆ ಜಿಲ್ಲಾವಾರು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆ ಬಳಿಕ, ಅಗತ್ಯವಾದ ಭೂಮಿಯ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು. ದಿನದಿಂದ ದಿನಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕಷ್ಟದ ಕೆಲಸ ಆಗುತ್ತಿದೆ. ಹೀಗಾಗಿ, ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿ ನಮ್ಮಲ್ಲಿ ಲಭ್ಯವಿದೆ ಎಂಬ ಭಾವನೆಯನ್ನು ಹೂಡಿಕೆದಾರರಲ್ಲಿ ಮೂಡಿಸಬೇಕಿದೆ’ ಎಂದೂ ಅವರು ಹೇಳಿದರು.

2022ರ ಮಾರ್ಚ್‌ನಲ್ಲಿ ಸಮಾವೇಶ: ‘ರಾಜ್ಯದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2022ರ ಮಾರ್ಚ್‌ನಲ್ಲಿ ಆಯೋಜಿಸುವ ಚಿಂತನೆ ಇದೆ. ಕೋವಿಡ್‌ ಕಾರಣದಿಂದ, ಈ ವರ್ಷ ಸಮಾವೇಶ ನಡೆಸಲು ಸಾಧ್ಯವಾಗಿಲ್ಲ. ಈ ಸಮಾವೇಶದ ವೇಳೆಗೆ ಭೂಮಿ, ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್‌ ಮತ್ತು ಇತರ ಮೂಲಸೌಲಭ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಬೇಕಿದೆ’ ಎಂದು ಹೇಳಿದರು.

‘ಯೋಜನೆಗಳಿಗೆ ಸರ್ಕಾರ ಅನುಮೋದನೆ ಪಡೆದ ತಕ್ಷಣ, ಆ ಯೋಜನೆಯ ಹೂಡಿಕೆದಾರರನ್ನು ಬ್ಯಾಂಕುಗಳು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ಇಲಾಖೆ ಶೀಘ್ರದಲ್ಲಿ ರೂಪಿಸಲಿದೆ. ಆ ಮೂಲಕ, ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು ಕೂಡಾ ಪ್ರಯತ್ನಿಸಲಾಗುವುದು’ ಎಂದೂ ನಿರಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.