ADVERTISEMENT

ಮ್ಯೂಚುವಲ್‌ ಫಂಡ್‌ ತಪ್ಪು ಆಯ್ಕೆಯಿಂದ ತಪ್ಪಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 19:30 IST
Last Updated 10 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವುದು ಹೇಗೆ’ ಎಂಬ ಶೀರ್ಷಿಕೆ ಈ ಲೇಖನಕ್ಕೆ ಏಕಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಇದಕ್ಕೆ ನೇರವಾದ ಉತ್ತರ ಇಲ್ಲಿದೆ: ಮ್ಯೂಚುವಲ್‌ ಫಂಡ್‌ಗಳ ಆಯ್ಕೆಯ ವಿಚಾರದಲ್ಲಿ ಎಲ್ಲರಿಗೂ ಸರಿಹೊಂದುವ ಸೂತ್ರವೊಂದು ಇಲ್ಲ. ನಿಮ್ಮ ಜೀವನ ಹೇಗಿದೆ, ನಿಮ್ಮ ಅಗತ್ಯಗಳು ಏನು, ನೀವು ಎಷ್ಟರಮಟ್ಟಿಗೆ ಹಣಕಾಸಿನ ಸವಾಲುಗಳನ್ನು ಸ್ವೀಕರಿಸಬಲ್ಲಿರಿ ಎಂಬುದೆಲ್ಲ ಮ್ಯೂಚುವಲ್‌ ಫಂಡ್‌ಗಳ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವುಗಳ ಜೊತೆಯಲ್ಲೇ, ಫಂಡ್‌ ಎಷ್ಟು ಲಾಭ ತಂದುಕೊಟ್ಟಿದೆ ಎಂಬುದೂ ಮುಖ್ಯವಾಗುತ್ತದೆ.

ಮ್ಯೂಚುವಲ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಮಾಡಬಾರದ ತಪ್ಪುಗಳು ಯಾವುವು ಎಂಬುದು ಗೊತ್ತಿದ್ದರೆ, ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಮಾಡಬಾರದ ತಪ್ಪುಗಳ ಪಟ್ಟಿ ಇಲ್ಲಿದೆ:

ಡಿವಿಡೆಂಡ್ ಘೋಷಣೆ

ADVERTISEMENT

ಹೆಚ್ಚಿನ ಡಿವಿಡೆಂಡ್ ಘೋಷಿಸಿವೆ ಎಂಬ ಕಾರಣಕ್ಕೇ ಫಂಡ್‌ಗಳನ್ನು ಆಯ್ಕೆ ಮಾಡಬೇಡಿ. ಇದಕ್ಕೆ ಹಲವು ಕಾರಣಗಳಿವೆ. ಒಂದು; ಫಂಡ್‌ ಹೌಸ್‌ಗಳು ಕಾಲಕಾಲಕ್ಕೆ ಅಂತಹ ಡಿವಿಡೆಂಡ್ ಘೋಷಿಸಲೇಬೇಕು ಎಂಬ ನಿಯಮವೇನೂ ಇಲ್ಲ, ಘೋಷಿಸುವ ಡಿವಿಡೆಂಡ್‌ ಇಂತಿಷ್ಟೇ ಪ್ರಮಾಣದಲ್ಲಿ ಇರಬೇಕು ಎಂಬ ನಿಯಮವೂ ಇಲ್ಲ. ಮಾರುಕಟ್ಟೆ ಭಾರಿ ಕುಸಿತ ಕಂಡಾಗ ಡಿವಿಡೆಂಡ್ ಘೋಷಣೆಯನ್ನು ನಿಲ್ಲಿಸಲೂ
ಬಹುದು. ಎರಡನೆಯ ಕಾರಣ; ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡು
ವುದು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವುದಕ್ಕೆ. ಹೀಗಿರುವಾಗ, ಕಾಲಕಾಲಕ್ಕೆ ಲಾಭಾಂಶವನ್ನು ನಗದು ಮಾಡಿಕೊಳ್ಳುವುದರಿಂದ ಸಂಪತ್ತು ಸೃಷ್ಟಿಗೆ ಅವಕಾಶ ಸಿಗುವುದಿಲ್ಲ.

ಕಡಿಮೆ ಎನ್‌ಎವಿ

ಷೇರುಗಳಲ್ಲಿ ಹೂಡಿಕೆ ಮಾಡಿದ ಅನುಭವ ಇಟ್ಟುಕೊಂಡು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಬರುವವರು, ಫಂಡ್‌ನ ನಿವ್ವಳ ಆಸ್ತಿ ಮೌಲ್ಯ (ಎನ್‌ಎವಿ) ಒಂದು ವರ್ಷದಲ್ಲಿ ಎಷ್ಟು ಕಡಿಮೆ ಆಗಿತ್ತು, ಎಷ್ಟು ಹೆಚ್ಚಳ ಆಗಿತ್ತು ಎಂಬುದನ್ನು ಪರಿಶೀಲಿಸುವುದಿದೆ. ಆದರೆ, ಒಂದು ವರ್ಷದ ಅವಧಿಯನ್ನು ಪರಿಗಣಿಸಿದಾಗ, ಎನ್‌ಎವಿ ಬೆಲೆ ತೀರಾ ಕಡಿಮೆ ಇದೆ ಎಂದಾದರೆ, ಆಗ ಆ ಫಂಡ್‌ನಲ್ಲಿ ಹೂಡಿಕೆ ಮಾಡಲು ಒಳ್ಳೆಯ ಅವಕಾಶ ಸೃಷ್ಟಿಯಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕಾಗಿ ಇಲ್ಲ.

ಹೂಡಿಕೆಯಾಗಿರುವ ಹಣ

ಫಂಡ್‌ನಲ್ಲಿ ಒಟ್ಟಾರೆ ಹೂಡಿಕೆ ಆಗಿರುವ ಹಣ ಹೆಚ್ಚಿದ್ದರೆ, ಅದನ್ನು ಗಮನಿಸಿ ಕೆಲವರು ‘ಇದು ಒಳ್ಳೆಯ ಫಂಡ್’ ಎಂದು ತೀರ್ಮಾನಿಸಬಹುದು. ಆದರೆ, ಸಣ್ಣ ಬ್ಯಾಂಕ್‌ಗಿಂತ ದೊಡ್ಡ ಬ್ಯಾಂಕ್‌ ಉತ್ತಮ ಎನ್ನುವ ನಂಬಿಕೆಯ ಆಧಾರದಲ್ಲಿ ಸಣ್ಣ ಫಂಡ್‌ಗಿಂತ ದೊಡ್ಡ ಫಂಡ್‌ ಉತ್ತಮ ಎಂದು ತೀರ್ಮಾನಿಸುವುದು ಸರಿಯಲ್ಲ. ಈಕ್ವಿಟಿ ಮೇಲಿನ ಹೂಡಿಕೆಯ ಫಂಡ್‌ನ ಗಾತ್ರವು (ಅಂದರೆ, ಆ ಫಂಡ್‌ನಲ್ಲಿ ಹೂಡಿಕೆ ಆಗಿರುವ ಒಟ್ಟು ಹಣ) ಕೆಲವೊಮ್ಮೆ ಶಾಪವಾಗಿಯೂ ಕೆಲಸ ಮಾಡಬಹುದು.

ಉದಾಹರಣೆಗೆ, ಸ್ಮಾಲ್‌ ಕ್ಯಾಪ್‌ ಕಂಪನಿಗಳಲ್ಲಿ ಹೂಡಿಕೆ ಮಾಡುವ ಫಂಡ್‌ನಲ್ಲಿ ಭಾರಿ ಮೊತ್ತ ಹೂಡಿಕೆ ಆಗಿದೆ ಎಂದಾದರೆ ಅದರಿಂದ ಹೆಚ್ಚಿನ ಲಾಭ ಬರದೇ ಇರುವ ಸಾಧ್ಯತೆಯೂ ಇದೆ. ಫಂಡ್‌ನ ಗಾತ್ರದ ಮೇಲೆ ಮಾತ್ರ ಗಮನ ನೀಡಿದಾಗ, ಒಳ್ಳೆಯ ಲಾಭ ತಂದುಕೊಡಬಹುದಾದ ಸಣ್ಣ ಗಾತ್ರದ ಹೊಸ ಫಂಡ್‌ಗಳು ಹೂಡಿಕೆದಾರರ ಕಣ್ಣಿಗೆ ಬೀಳದಿರುವ ಸಾಧ್ಯತೆಯೂ ಇದೆ.

ವೆಚ್ಚ

ಫಂಡ್‌ಗಳ ಮೂಲಕ ಮಾಡುವ ಹೂಡಿಕೆಯಲ್ಲಿ ಒಂದಿಷ್ಟು ವೆಚ್ಚಗಳೂ ಇವೆ. ಇದನ್ನು ಎಕ್ಸ್‌ಪೆನ್ಸ್‌ ರೇಷ್ಯೋ ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ಹೂಡಿಕೆದಾರರಿಗೆ ಹೆಚ್ಚಿನ ಅರಿವು ಮೂಡುತ್ತಿರುವ ಕಾರಣ, ಯಾವ ಫಂಡ್‌ಗೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಹಲವರು ಗಮನಿಸುತ್ತಿದ್ದಾರೆ. ಮ್ಯೂಚುವಲ್‌ ಫಂಡ್‌ ಹೌಸ್‌ಗಳು ತಮ್ಮ ಪಾಲಿನ ವೆಚ್ಚವನ್ನು ಕಡಿತ ಮಾಡಿಯೇ ಎನ್‌ಎವಿ ಬೆಲೆ ಎಷ್ಟು ಎಂಬುದನ್ನು ಘೋಷಿಸುತ್ತವೆ. ಹಾಗಾಗಿ, ಹೂಡಿಕೆದಾರರಿಗೆ ಸಿಗುವ ಲಾಭವು ವೆಚ್ಚವನ್ನು ಕಡಿತಮಾಡಿಕೊಂಡ ನಂತರದ್ದೇ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ಈಕ್ವಿಟಿ ಫಂಡ್‌ ಇತರ ಫಂಡ್‌ಗಳಿಗಿಂತ ಹೆಚ್ಚಿನ ಲಾಭ ತಂದುಕೊಟ್ಟಿದೆ ಎಂದಾದರೆ, ಎಕ್ಸ್‌ಪೆನ್ಸ್ ರೇಷ್ಯೋ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಆದರೆ ಸಾಲಪತ್ರ ಆಧಾರಿತ ಫಂಡ್‌ಗಳಲ್ಲಿ ಲಾಭ ಕಡಿಮೆ ಇರುವ ಕಾರಣ, ಎಕ್ಸ್‌ಪೆನ್ಸ್ ರೇಷ್ಯೋ ಬಗ್ಗೆ ತುಸು ಗಮನ ನೀಡಬೇಕು.

ಒಂದು ವರ್ಷದ ಲಾಭ

ನೀವು ಒಂದು ಫಂಡ್‌ ತಂದುಕೊಟ್ಟಿರುವ ಲಾಭ ಎಷ್ಟಿದೆ ಎಂಬುದನ್ನು ಗಮನಿಸುವಾಗ, ಹಾಗೆ ಗಮನಿಸುತ್ತಿರುವ ದಿನಾಂಕದಿಂದ ಹಿಂದಿನ ಒಂದು ವರ್ಷದ ಅವಧಿಯಲ್ಲಿ ಆ ಫಂಡ್‌ ಎಷ್ಟು ಲಾಭ ತಂದುಕೊಟ್ಟಿದೆ ಎಂಬುದಕ್ಕೆ ತೀರಾ ಪ್ರಾಧಾನ್ಯ ನೀಡುವ ಅಗತ್ಯವಿಲ್ಲ. ಅದರ ಬದಲು ಫಂಡ್‌ ಎಷ್ಟು ಸುಸ್ಥಿರವಾಗಿ ಲಾಭ ತಂದುಕೊಟ್ಟಿದೆ, ಮಾರುಕಟ್ಟೆ ಕುಸಿತದ ಹಾದಿಯಲ್ಲಿದ್ದ ಅವಧಿಯಲ್ಲಿ ಈ ಫಂಡ್‌ ತನ್ನಲ್ಲಿ ಹೂಡಿಕೆ ಮಾಡಿದವರ ಅಸಲನ್ನು ಎಷ್ಟರಮಟ್ಟಿಗೆ ಕಾಪಾಡಿದೆ ಎಂಬುದನ್ನು ಗಮನಿಸುವುದು ಒಳಿತು.

ಫಂಡ್‌ ಹೌಸ್‌ನ ಹೆಸರು

ನಮ್ಮಲ್ಲಿ ಬಹುತೇಕರಿಗೆ ತಾವು ವಹಿವಾಟು ನಡೆಸುವ ಬ್ಯಾಂಕ್‌ನ ಹೆಸರು ಚಿರಪರಿಚಿತ ಆಗಿರುತ್ತದೆ. ಹಾಗಾಗಿಯೇ, ಆ ಬ್ಯಾಂಕ್‌ಗಳು ಮುನ್ನಡೆಸುತ್ತಿರುವ ಮ್ಯೂಚುವಲ್‌ ಫಂಡ್‌ ಹೌಸ್‌ ಅತ್ಯುತ್ತಮ ಎಂದು ನಾವು ಭಾವಿಸುವ ಸಾಧ್ಯತೆ ಇರುತ್ತದೆ. ಆದರೆ, ಎಲ್ಲ ಸಂದರ್ಭಗಳಲ್ಲೂ ಅವು ಅತ್ಯುತ್ತಮ ಆಗಿರಬೇಕು ಎಂದೇನೂ ಇಲ್ಲ. ಬ್ಯಾಂಕ್‌ಗಳ ಅಧೀನದ ಫಂಡ್‌ ಹೌಸ್‌ಗಳು ನಿರ್ವಹಿಸುತ್ತಿರುವ ಕೆಲವು ಫಂಡ್‌ಗಳು ಚೆನ್ನಾಗಿ ಲಾಭ ತಂದುಕೊಡದಿರುವ ನಿದರ್ಶನಗಳೂ ಇವೆ. ಮ್ಯೂಚುವಲ್‌ ಫಂಡ್‌ಗಳ ವಿಚಾರದಲ್ಲಿ ಹೆಚ್ಚು ಗಣನೆಗೆ ತೆಗೆದುಕೊಳ್ಳಬೇಕಿರುವುದು ಫಂಡ್‌ ಎಷ್ಟು ಸ್ಥಿರವಾಗಿ ಲಾಭ ತಂದುಕೊಟ್ಟಿದೆ, ಫಂಡ್‌ ಮ್ಯಾನೇಜರ್‌ ಎಷ್ಟು ದಕ್ಷ ಎಂಬುದನ್ನು.

ಲೇಖಕಿ: ಪ್ರೈಮ್‌ಇನ್ವೆಸ್ಟರ್‌. ಇನ್‌ನ ಸಹ ಸಂಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.