ADVERTISEMENT

ಎಸ್‌ಐಪಿ: ₹1.66 ಲಕ್ಷ ಕೋಟಿ ಹೂಡಿಕೆ

ಪಿಟಿಐ
Published 13 ಡಿಸೆಂಬರ್ 2023, 15:08 IST
Last Updated 13 ಡಿಸೆಂಬರ್ 2023, 15:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಸಕ್ತ ಸಾಲಿನ ಜನವರಿಯಿಂದ ನವೆಂಬರ್‌ ಅಂತ್ಯದವರೆಗೆ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಆಗಿರುವ ಹೂಡಿಕೆಯು ₹1.66 ಲಕ್ಷ ಕೋಟಿಗೆ ತಲುಪಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ಗಳ ಒಕ್ಕೂಟ (ಎಎಂಎಫ್‌ಐ) ಹೇಳಿದೆ. 

ಮತ್ತೊಂದೆಡೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸಾಮಾನ್ಯ ಜನರನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯತ್ತ ಸೆಳೆಯಲು ಮುಂದಾಗಿದೆ. ಇದರ ಭಾಗವಾಗಿ ಹೂಡಿಕೆ ಮಿತಿಯನ್ನು ₹250ಕ್ಕೆ ಇಳಿಸುವುದಾಗಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಕೂಡ ಹೇಳಿದ್ದಾರೆ. ಇದು ಅನುಷ್ಠಾನಗೊಂಡರೆ ಹೂಡಿಕೆಯು ಮತ್ತಷ್ಟು ಬಲಗೊಳ್ಳಲಿದ್ದು, ಬಂಡವಾಳವೂ ಹೆಚ್ಚಳವಾಗುವ ನಿರೀಕ್ಷೆಯಿದೆ.

ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳ ಮೇಲಿನ ಹೂಡಿಕೆಯ ಲಾಭ ಮತ್ತು ಹೂಡಿಕೆಯ ಸುಲಭ ವಿಧಾನ ಕುರಿತು ಒಕ್ಕೂಟವು ಜಾಗೃತಿ ಮೂಡಿಸಿದೆ. ಬಂಡವಾಳ ಕ್ರೋಡೀಕರಿಸುವ ಸೆಬಿಯ ಕಾರ್ಯಸೂಚಿಯು ಭಾರತದ ಷೇರುಪೇಟೆಗೆ  ವರದಾನವಾಗಿದೆ. 

ADVERTISEMENT

‘ಹೂಡಿಕೆದಾರರು ಶಿಸ್ತುಬದ್ಧ ಹೂಡಿಕೆಯ ಮಾರ್ಗವಾಗಿ ಎಸ್‌ಐಪಿಗೆ ಬೆಂಬಲ ಮುಂದುವರಿಸುವ ಸಾಧ್ಯತೆಯಿದೆ. ಅಲ್ಲದೇ, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಆರೋಗ್ಯಕರ ಬೆಳವಣಿಗೆಯು ಹೂಡಿಕೆ ಹೆಚ್ಚಳಕ್ಕೆ ನೆರವಾಗಿದೆ. ಈ ಪ್ರವೃತ್ತಿಯು ಮುಂದಿನ ವರ್ಷವೂ ಮುಂದುವರಿಯುವ ನಿರೀಕ್ಷೆಯಿದೆ’ ಎಂದು ಮೋತಿಲಾಲ್ ಓಸ್ವಾಲ್ ಎಎಂಸಿಯ ಮುಖ್ಯ ಅಧಿಕಾರಿ(ವ್ಯಾಪಾರ) ಅಖಿಲ್ ಚತುರ್ವೇದಿ ಹೇಳಿದ್ದಾರೆ.

‘ಹೂಡಿಕೆಯ ಮಿತಿ ಇಳಿಸುವ ನೀತಿಯು ಸಣ್ಣ ಪ್ರಮಾಣದ ಆದಾಯ ಹೊಂದಿರುವವರಿಗೆ ಹೂಡಿಕೆಯ ಬಾಗಿಲನ್ನು ತೆರೆಯಲಿದೆ’ ಎಂದು ಆದಿತ್ಯ ಬಿರ್ಲಾ ಸನ್‌ ಲೈಫ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಸಿಇಒ ಬಾಲಸುಬ್ರಮಣಿಯನ್ ಹೇಳಿದ್ದಾರೆ.

‘ಸೆಬಿಯ ಈ ನಿರ್ಧಾರದಿಂದ ಜನಸಾಮಾನ್ಯರು ಮ್ಯೂಚುವಲ್‌ ಫಂಡ್‌ಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ. ಜತೆಗೆ, ಇದು ಸಣ್ಣ ವ್ಯಾಪಾರಿಗಳ ವಲಯಕ್ಕೂ ಹೂಡಿಕೆಯನ್ನು ವಿಸ್ತರಿಸಲು ಅನುಕೂಲವಾಗಲಿದೆ’ ಎಂದು ಝೆರೋಧಾ ಫಂಡ್ ಹೌಸ್ ಸಿಇಒ ವಿಶಾಲ್ ಜೈನ್ ಪ್ರತಿಪಾದಿಸಿದ್ದಾರೆ.

ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುಯಲ್ ಫಂಡ್ ಈಗಾಗಲೇ ₹100ಗಳಿಂದ ಪ್ರಾರಂಭವಾಗುವ ಎಸ್‌ಐಪಿಯನ್ನು ಅನುಷ್ಠಾನಗೊಳಿಸಿದೆ. 

ಎಸ್‌ಐಪಿಗಳ ನಿರ್ವಹಣಾ ಸಂಪತ್ತಿನ ಮೌಲ್ಯವು (ಎಯುಎಂ) ಈ ವರ್ಷದ ನವೆಂಬರ್ ಅಂತ್ಯಕ್ಕೆ ಶೇ 38ರಷ್ಟು ಹೆಚ್ಚಾಗಿ, ₹9.31 ಲಕ್ಷ ಕೋಟಿಗೆ ತಲುಪಿದೆ.  ಕಳೆದ ವರ್ಷದ ಡಿಸೆಂಬರ್‌ನಲ್ಲಿ ₹6.75 ಲಕ್ಷ ಕೋಟಿ ಇತ್ತು. ಮ್ಯೂಚುವಲ್ ಫಂಡ್‌ಗಳು ಸುಮಾರು 7.44 ಕೋಟಿ ಎಸ್‌ಐಪಿ ಖಾತೆಗಳನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.