ADVERTISEMENT

ಉದ್ಯಮಿ ರಾಕೇಶ್‌ ಜುಂಝನ್‌ವಾಲಾ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2022, 5:09 IST
Last Updated 14 ಆಗಸ್ಟ್ 2022, 5:09 IST
ನರೇಂದ್ರ ಮೋದಿ ಮತ್ತು ರಾಕೇಶ್ ಜುಂಝನ್‌ವಾಲಾ
ನರೇಂದ್ರ ಮೋದಿ ಮತ್ತು ರಾಕೇಶ್ ಜುಂಝನ್‌ವಾಲಾ    

ನವದೆಹಲಿ: ಭಾರತದ ಉದ್ಯಮಿ, ಆಕಾಸಾ ಏರ್ ಕಂಪನಿಯ ಸ್ಥಾಪಕ ರಾಕೇಶ್ ಜುಂಝನ್‌ವಾಲಾ (62) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ರಾಕೇಶ್ ಅವರು​ ಮುಂಬೈನ ಬ್ರೀಚ್​​ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 6:30ಕ್ಕೆ ಕೊನೆಯುಸಿರೆಳೆದಿದ್ದಾರೆ.

‘ರಾಕೇಶ್‌ ಜುಂಝನ್‌ವಾಲಾ ಅವರು ಅದಮ್ಯ ವ್ಯಕ್ತಿ. ಅವರ ಸಂಪೂರ್ಣ ಬದುಕು ವಿನೋದ ಮತ್ತು ಗಾಂಭೀರ್ಯತೆಯಿಂದ ಕೂಡಿದ್ದಾಗಿದೆ. ಹಣಕಾಸು ಕ್ಷೇತ್ರಕ್ಕೆ (ಆರ್ಥಿಕ ವಲಯ) ಅಳಿಸಲಾಗದ ಕೊಡುಗೆಯನ್ನು ನೀಡಿದ್ದಾರೆ. ಭಾರತದ ಪ್ರಗತಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಅವರ ಅಗಲಿಕೆ ಬೇಸರವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ದಲಾಲ್ ಸ್ಟ್ರೀಟ್‌ನ ‘ಬಿಗ್ ಬುಲ್’ ಎಂದೇ ಖ್ಯಾತರಾಗಿದ್ದ ರಾಕೇಶ್‌ ಜುಂಝನ್‌ವಾಲಾ ಅವರ ಯುಗಾಂತ್ಯವಾಗಿದೆ. ಅವರ ಕುಟುಂಬಸ್ಥರು ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

‘ಹಲವರಿಗೆ ಸ್ಪೂರ್ತಿ ನೀಡಿದ ವ್ಯಾಪಾರಿ, ಹೂಡಿಕೆದಾರ ಮತ್ತು ಷೇರು ಮಾರುಕಟ್ಟೆಯ ದಂತಕಥೆ. ರಾಕೇಶ್‌ ಜುಂಝನ್‌ವಾಲಾ ಅವರನ್ನು ಸ್ಮರಿಸಲಾಗುವುದು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಕ್ಯಾಪಿಟಲ್​​ ಮೈಂಡ್​ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್​ ಶೆಣೈ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಪಾಲುದಾರರೊಂದಿಗೆ ಸೇರಿ ರಾಕೇಶ್ ಜುಂಝನ್‌ವಾಲಾ ಆಕಾಸಾ ಏರ್ ಕಂಪನಿಯನ್ನು ಆರಂಭಿಸಿದ್ದರು.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ತನಗೆ ವಾಣಿಜ್ಯ ಉದ್ದೇಶಕ್ಕೆ ವಿಮಾನ ಬಳಸಲು ಪ್ರಮಾಣಪತ್ರ ನೀಡಿದೆ. ಕಂಪನಿಯು ಈ ತಿಂಗಳಿನಲ್ಲೇ ವಿಮಾನಯಾನ ಸೇವೆ ಆರಂಭಿಸಲಿದೆ ಎಂದು ಆಕಾಸಾ ಏರ್ ಹೇಳಿತ್ತು.

ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹೊತ್ತಿಗೆ 18 ವಿಮಾನಗಳನ್ನು ಕಂಪನಿ ಹೊಂದಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.