ADVERTISEMENT

ಬ್ಯಾಂಕ್‌ ಮುಖ್ಯಸ್ಥರ ಜೊತೆ ಪ್ರಧಾನಿ ಸಭೆ

ಪಿಟಿಐ
Published 29 ಜುಲೈ 2020, 21:40 IST
Last Updated 29 ಜುಲೈ 2020, 21:40 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಬ್ಯಾಂಕಿಂಗ್ ವಲಯದ ಪ್ರಮುಖರ ಜೊತೆ ಬುಧವಾರ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕಾಗಿ ಉತ್ಪಾದಕ ವಲಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸುವ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟರು.

ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಮೂರು ತಾಸುಗಳ ಈ ಸಭೆಯಲ್ಲಿ, ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕುಗಳ ಮುಖ್ಯಸ್ಥರು, ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಮುಖ್ಯಸ್ಥರು ಪಾಲ್ಗೊಂಡಿದ್ದರು.

ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವಲ್ಲಿ ಹಣಕಾಸು ವಲಯದ ಪ್ರಾಮುಖ್ಯದ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಆತ್ಮನಿರ್ಭರ ಭಾರತ ನಿರ್ಮಾಣ ಕಾರ್ಯದಲ್ಲಿ ಹಣಕಾಸು ವಲಯಕ್ಕೆ ಸರ್ಕಾರದಿಂದ ಎಲ್ಲ ನೆರವು ಸಿಗಲಿದೆ ಎಂಬ ಭರವಸೆಯನ್ನು ಪ್ರಧಾನಿಯವರು ನೀಡಿದರು.

ADVERTISEMENT

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅಧ್ಯಕ್ಷ ರಜನೀಶ್ ಕುಮಾರ್, ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ವ್ಯವಸ್ಥಾಪಕ ನಿರ್ದೇಶ ಎಸ್.ಎಸ್. ಮಲ್ಲಿಕಾರ್ಜುನ ರಾವ್, ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಬಕ್ಷಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಪುರಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮವಾಗಿ, ಬ್ಯಾಂಕುಗಳು ಸಾಲ ನೀಡುವ ಪ್ರಮಾಣದಲ್ಲಿನ ಬೆಳವಣಿಗೆಯು ಮೇ ತಿಂಗಳಲ್ಲಿ ಶೇಕಡ 7ಕ್ಕೆ ಇಳಿದಿದೆ. ಹಿಂದಿನ ವರ್ಷದ ಮೇ ತಿಂಗಳಲ್ಲಿ ಇದು ಶೇ 11.5ರಷ್ಟಿತ್ತು. ಸಾಲ ನೀಡಿಕೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಶೇಕಡ 4ರಷ್ಟಕ್ಕೆ ಇಳಿಸಿದೆ. ಹೀಗಿದ್ದರೂ, ಸಾಲ ನೀಡಿಕೆ ಹೆಚ್ಚಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.