ಜಿಎಸ್‌ಟಿ
ನವದೆಹಲಿ: ಜಿಎಸ್‌ಟಿ ಪರಿಷ್ಕರಣೆಯ ಪ್ರಯೋಜನದ ವರ್ಗಾವಣೆಗೆ ಸಂಬಂಧಿಸಿದಂತೆ, ಒಂದೇ ವಾರದಲ್ಲಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು (ಎನ್‌ಸಿಎಚ್) 3 ಸಾವಿರ ದೂರುಗಳನ್ನು ಸ್ವೀಕರಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ಹೇಳಿದ್ದಾರೆ.
‘ಪ್ರತಿ ದಿನವೂ ನಾವು ದೂರುಗಳನ್ನು ಸ್ವೀಕರಿಸುತ್ತಿದ್ದೇವೆ. ಈ ದೂರುಗಳನ್ನು ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿಗೆ (ಸಿಬಿಐಸಿ) ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ’ ಎಂದು ಸೋಮವಾರ ಹೇಳಿದ್ದಾರೆ.
ಜಿಎಸ್‌ಟಿ ದರ ಇಳಿಕೆ ಪ್ರಯೋಜನ ವರ್ಗಾಯಿಸದೇ ದಿಕ್ಕು ತಪ್ಪಿಸುವ ಬಗೆಯಲ್ಲಿ ರಿಯಾಯಿತಿ ದರವನ್ನು ನಿಗದಿ ಮಾಡುವ ಮೂಲಕ ಗ್ರಾಹಕರಿಗೆ ಎಲ್ಲಿ ವಂಚನೆ ಮಾಡಲಾಗುತ್ತಿದೆ ಎಂಬುದನ್ನು ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ.
ವಿವಿಧ ವಲಯಗಳಿಂದ ದಾಖಲಾಗುವ ಈ ದೂರುಗಳ ಸಮಗ್ರ ಚಿತ್ರಣ ಪಡೆದುಕೊಳ್ಳಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮತ್ತು ಚಾಟ್‌ಬಾಟ್ ತಂತ್ರಜ್ಞಾನವನ್ನು ನಿಯೋಜಿಸಲಾಗಿದೆ.
ದಿಕ್ಕು ತಪ್ಪಿಸುವ ರಿಯಾಯಿತಿಗಳು ಅಥವಾ ಜಾಹೀರಾತು, ನ್ಯಾಯೋಚಿತವಲ್ಲದ ವ್ಯಾಪಾರ ವಹಿವಾಟು ನಡೆಸುವ ಮೂಲಕ ಜಿಎಸ್‌ಟಿ ಪರಿಷ್ಕರಣೆ ಪ್ರಯೋಜನನ್ನು ಗ್ರಾಹಕರಿಗೆ ವರ್ಗಾಯಿಸದ ದೂರುಗಳನ್ನು ವಿಶ್ಲೇಷಿಸಲಾಗುವುದು. ಬೇರೆ ಬೇರೆ ವಲಯಗಳಿಂದ ದೂರುಗಳು ಹೆಚ್ಚಾದರೆ, ಅವುಗಳನ್ನು ಕಾನೂನಿನ ಅಡಿ ಪ್ರತ್ಯೇಕವಾಗಿ ವರ್ಗೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.