ADVERTISEMENT

ಆದೇಶ ಮಾರ್ಪಾಡು ಮನವಿತಿರಸ್ಕರಿಸಿದ ಎನ್‌ಸಿಎಲ್‌ಎಟಿ

ಟಾಟಾ ಸನ್ಸ್‌– ಸೈರಸ್‌ ಮಿಸ್ತ್ರಿ ಪ್ರಕರಣ

ಪಿಟಿಐ
Published 6 ಜನವರಿ 2020, 19:45 IST
Last Updated 6 ಜನವರಿ 2020, 19:45 IST

ನವದೆಹಲಿ:ಟಾಟಾ ಸನ್ಸ್‌ ಮತ್ತು ಸೈರಸ್‌ ಮಿಸ್ತ್ರಿ ಪ್ರಕರಣ ಸಂಬಂಧ ನೀಡಿದ ಆದೇಶದಲ್ಲಿ ಮಾರ್ಪಾಟು ಮಾಡಬೇಕೆಂಬ ಕಂಪನಿ ರಿಜಿಸ್ಟ್ರಾರ್‌ (ಆರ್‌ಒಸಿ) ಕೋರಿಕೆಯನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯು ತಿರಸ್ಕರಿಸಿದೆ.

ಡಿಸೆಂಬರ್‌ 18ರಂದು ನೀಡಿದ್ದ ಆದೇಶವನ್ನು ಬದಲಿಸುವ ಸಂಬಂಧ ಯಾವುದೇ ಸಮರ್ಥನೀಯ ಕಾರಣಗಳು ಇಲ್ಲ ಎಂದು ಇಬ್ಬರು ಸದಸ್ಯರ ಪೀಠವು ಸೋಮವಾರ ತಿಳಿಸಿದೆ.

ಟಾಟಾ ಸನ್ಸ್‌ನ ಸ್ಥಾನಮಾನವನ್ನು ಸಾರ್ವಜನಿಕ ಕಂಪನಿಯಿಂದ ಖಾಸಗಿ ಕಂಪನಿ ಎಂದು ಕಂಪನಿ ರಿಜಿಸ್ಟ್ರಾರ್‌ ಬದಲಿಸಿರುವುದು ಕಾನೂನುಬಾಹಿರವಾಗಿದೆ. ಈ ನಿರ್ಧಾರ ಕೈಬಿಡಬೇಕು ಎಂದು ನ್ಯಾಯಮಂಡಳಿ ಆದೇಶಿಸಿತ್ತು.

ADVERTISEMENT

ನ್ಯಾಯಮಂಡಳಿಯ ಆದೇಶದಲ್ಲಿ ಉಲ್ಲೇಖಿಸಿರುವ, ‘ಆರ್‌ಒಸಿ ನೆರವಿನಿಂದ ಟಾಟಾ ಸನ್ಸ್‌ನ ಸ್ಥಾನಮಾನ ಬದಲಿಸಲಾಗಿದೆ’ ಮತ್ತು ‘ಕಾನೂನುಬಾಹಿರ’ ಪದಗಳನ್ನು ಕೈಬಿಡಬೇಕು ಎಂದು ಕಂಪನಿ ರಿಜಿಸ್ಟ್ರಾರ್‌ ಪರವಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಕಂಪನಿ ಕಾಯ್ದೆಗೆ ಅನುಗುಣವಾಗಿಯೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದೂ ಪ್ರತಿಪಾದಿಸಲಾಗಿತ್ತು. ‘ಆರ್‌ಒಸಿ’ಯು ಕಂಪನಿ ವ್ಯವಹಾರ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.