ತಯಾರಿಕಾ ವಲಯ(ಪ್ರಾತಿನಿಧಿಕ ಚಿತ್ರ)
ನವದೆಹಲಿ: ‘ದೇಶದ ತಯಾರಿಕಾ ವಲಯದ ಪ್ರಗತಿ ಜನವರಿ ತಿಂಗಳಲ್ಲಿ 6 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ’ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ವರದಿ ಸೋಮವಾರ ತಿಳಿಸಿದೆ.
2024ರ ಡಿಸೆಂಬರ್‌ನಲ್ಲಿ ಸೂಚ್ಯಂಕವು 56.4ರಷ್ಟಿತ್ತು. ಆದರೆ, ಜನವರಿಯಲ್ಲಿ ಸೂಚ್ಯಂಕವು 57.7ಕ್ಕೆ
ಏರಿಕೆ ಆಗಿದೆ. ರಫ್ತಿಗೆ ಬೇಡಿಕೆ ಹೆಚ್ಚಿದ್ದರಿಂದ ಸೂಚ್ಯಂಕ ಹೆಚ್ಚಳ ವಾಗಿದೆ ಎಂದು ತಿಳಿಸಿದೆ. ಡಿಸೆಂಬರ್ ನಲ್ಲಿ ದಾಖಲಾಗಿದ್ದ ಸೂಚ್ಯಂಕವು ಒಂದು ವರ್ಷದ ಕನಿಷ್ಠ ಮಟ್ಟವಾಗಿತ್ತು.
ಸೂಚ್ಯಂಕಗಳು 50ಕ್ಕಿಂತ ಕಡಿಮೆ ಇದ್ದರೆ ಪ್ರಗತಿ ಇಲ್ಲ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಹೆಚ್ಚಿದ್ದರೆ ಬೆಳವಣಿಗೆ ಇದೆ ಎಂದು ಪರಿಗಣಿಸಲಾಗುತ್ತದೆ.
‘ಭಾರತದ ತಯಾರಿಕಾ ವಲಯದ ಚಟುವಟಿಕೆಗಳು ಜನವರಿಯಲ್ಲಿ ಏರಿಕೆಗೊಂಡಿವೆ. ದೇಶೀಯ ಮತ್ತು ರಫ್ತು ಬೇಡಿಕೆ ಸದೃಢವಾಗಿವೆ. ಹೊಸ ಬೇಡಿಕೆಗಳು ಬೆಳವಣಿಗೆಗೆ ಸಹಕಾರ ನೀಡಿದವು’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ.
ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆಯಿಂದ ಪ್ರಗತಿ ಸಾಧ್ಯವಾಗಿದೆ ಎಂದು ಸರಕುಗಳ ತಯಾರಕರು ಹೇಳಿದ್ದಾರೆ. ಶೇ 32ರಷ್ಟು ಕಂಪನಿಗಳು ಮುಂಬರುವ ದಿನಗಳಲ್ಲಿ ಉತ್ಪಾದನೆ ಹೆಚ್ಚಳವಾಗುವ ನಿರೀಕ್ಷೆ ಹೊಂದಿವೆ. ಹೆಚ್ಚಿದ ಬೇಡಿಕೆ, ಉತ್ತಮ ಗ್ರಾಹಕ ಸಂಬಂಧ, ಅನುಕೂಲಕರ ಆರ್ಥಿಕ ಸ್ಥಿತಿ, ಮಾರುಕಟ್ಟೆ ಪ್ರಯತ್ನ ಗಳಿಂದಾಗಿ ಪ್ರಗತಿ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಹೆಚ್ಚಿದ ಮಾರಾಟದಿಂದ ಕಂಪನಿ ಗಳು ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಮುಂದಾಗಿವೆ. ತಯಾರಿಕಾ ವೆಚ್ಚದ ಹಣದುಬ್ಬರ ಸತತ ಎರಡನೇ ತಿಂಗಳೂ ಇಳಿಕೆಯಾಗಿದೆ. ಇದು ತಯಾರಕರ ಮೇಲೆ ಮೇಲೆ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಭಂಡಾರಿ ಹೇಳಿದ್ದಾರೆ.
ಸುಮಾರು 400 ತಯಾರಕರಿಗೆ ಕಳುಹಿಸಲಾದ ಪ್ರಶ್ನಾವಳಿಗಳಲ್ಲಿ ನಮೂದಾಗಿರುವ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.