ನವದೆಹಲಿ: ‘ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಸಕಾಲದಲ್ಲಿ ಕಡಿಮೆ ಬಡ್ಡಿದರದಡಿ ಸಾಲ ಸೌಲಭ್ಯ ಕಲ್ಪಿಸಲು ಹೊಸ ಮಾದರಿಯ ಸಾಲ ಯೋಜನೆಯನ್ನು ರೂಪಿಸುವ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಎಂಎಸ್‌ಎಂಇ ಕುರಿತಂತೆ ಮಂಗಳವಾರ ನಡೆದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಉದ್ದಿಮೆ ಸ್ಥಾಪಿಸುವ ಐದು ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ₹2 ಕೋಟಿವರೆಗೆ ಸಾಲ ನೀಡಲಾಗುವುದು ಎಂದು ತಿಳಿಸಿದರು.
ಎಂಎಸ್‌ಎಂಇ ಅಭಿವೃದ್ಧಿಗೆ ಸಾಲ ಸೌಲಭ್ಯ ಕಲ್ಪಿಸುವುದಷ್ಟೇ ಮುಖ್ಯವಲ್ಲ. ಅವುಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಿದೆ. ಕೈಗಾರಿಕೆಗಳು ಸದಸ್ಯತ್ವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ರಾಜಕೀಯ ಅಸ್ಥಿರತೆ ತಾಂಡವವಾಡುತ್ತಿದೆ. ಹಾಗಾಗಿ, ಅಭಿವೃದ್ಧಿಯ ಕೇಂದ್ರವಾದ ಭಾರತದತ್ತ ಇಡೀ ವಿಶ್ವವೇ ದೃಷ್ಟಿ ನೆಟ್ಟಿದೆ ಎಂದರು.
14 ವಲಯಗಳಲ್ಲಿ ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್‌ಐ) ಯೋಜನೆ ಜಾರಿಗೊಳಿಸಿದ್ದು, ₹1.5 ಲಕ್ಷ ಕೋಟಿ ವಿನಿಯೋಗಿಸಲಾಗಿದೆ. ಇದರಿಂದ ಒಟ್ಟು ₹13 ಲಕ್ಷ ಕೋಟಿ ಮೌಲ್ಯದ ಉತ್ಪಾದನೆಯಾಗಿದೆ ಎಂದು ವಿವರಿಸಿದರು.
ಪ್ರತಿಯೊಂದು ದೇಶವು ಭಾರತದೊಂದಿಗೆ ಆರ್ಥಿಕ ಪಾಲುದಾರಿಕೆ ಹೊಂದಲು ಇಚ್ಛಿಸುತ್ತದೆ. ಹಾಗಾಗಿ, ತಯಾರಿಕಾ ವಲಯವು ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.