ADVERTISEMENT

ನಿವ್ವಳ ತೆರಿಗೆ ವರಮಾನ ಸಂಗ್ರಹ ಶೇ 5ರಷ್ಟು ಹೆಚ್ಚಳ: ನಿರ್ಮಲಾ ಸೀತಾರಾಮನ್

ಪಿಟಿಐ
Published 2 ಆಗಸ್ಟ್ 2021, 14:50 IST
Last Updated 2 ಆಗಸ್ಟ್ 2021, 14:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರದ ನಿವ್ವಳ ತೆರಿಗೆ ವರಮಾನವು ಈ ವರ್ಷದ ಮಾರ್ಚ್ 31ರ ಅಂತ್ಯಕ್ಕೆ ಶೇಕಡ 5ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.

2019–20ನೇ ಹಣಕಾಸು ವರ್ಷದಲ್ಲಿ ನಿವ್ವಳ ತೆರಿಗೆ ವರಮಾನವು ₹ 13.56 ಲಕ್ಷ ಕೋಟಿಯಷ್ಟಿತ್ತು. 2020–21ನೇ ಹಣಕಾಸು ವರ್ಷದಲ್ಲಿ ₹ 14.24 ಲಕ್ಷ ಕೋಟಿಗೆ ತಲುಪಿ, ಶೇ 5ರಷ್ಟು ಏರಿಕೆ ಕಂಡಿದೆ ಎಂದು ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ತೆರಿಗೆಯೇತರ ವರಮಾನ ಸಂಗ್ರಹವು 2019–20ರಲ್ಲಿ ಆಗಿದ್ದ ₹ 3.27 ಲಕ್ಷ ಕೋಟಿಗೆ ಹೋಲಿಸಿದರೆ 2020–21ರಲ್ಲಿ ಶೇ 36ರಷ್ಟು ಇಳಿಕೆ ಆಗಿದ್ದು ₹ 2.08 ಲಕ್ಷ ಕೋಟಿಯಷ್ಟಾಗಿದೆ.

ADVERTISEMENT

ತೆರಿಗೆ ಮತ್ತು ತೆರಿಗೆಯೇತರ ವರಮಾನವನ್ನು ಒಳಗೊಂಡು ಒಟ್ಟಾರೆ ನಿವ್ವಳ ವರಮಾನ ಸಂಗ್ರಹವು ಶೇ 3.09ರಷ್ಟು ಇಳಿಕೆ ಆಗಿದ್ದು ₹ 16.32 ಲಕ್ಷ ಕೋಟಿಗೆ ತಲುಪಿದೆ.

ತೆರಿಗೆ ವಂಚನೆ ತಡೆಯುವುದು, ತೆರಿಗೆ ನೆಲೆ ವಿಸ್ತರಣೆ, ರಿಟರ್ನ್ಸ್‌ ಸಲ್ಲಿಕೆಗೆ ಉತ್ತೇಜನ ನೀಡುವುದು, ವ್ಯಾಜ್ಯಗಳನ್ನು ತಗ್ಗಿಸುವುದು ಹಾಗೂ ಡಿಜಿಟಲ್‌ ವಹಿವಾಟಿಗೆ ಉತ್ತೇಜನದಂತಹ ಹಲವು ಉಪಕ್ರಮಗಳ ಮೂಲಕ ಸರ್ಕಾರವು ನೇರ ಮತ್ತು ಪರೋಕ್ಷ ತೆರಿಗೆ ವರಮಾನ ಸಂಗ್ರಹ ಹೆಚ್ಚಿಸಲು ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.

ಪರೋಕ್ಷ ತೆರಿಗೆ ಮೂಲಕ ಆಗುವ ಒಟ್ಟಾರೆ ಸೆಸ್‌ ಮತ್ತು ಸರ್ಚಾರ್ಜ್‌ ಸಂಗ್ರಹವು ಶೇ 53ರಷ್ಟು ಹೆಚ್ಚಾಗಿದ್ದು ₹ 4.39 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರು ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.