ಹೊಸ ಆರ್ಥಿಕ ವರ್ಷ ಮಂಗಳವಾರದಿಂದ ಆರಂಭವಾಗಿದೆ. ಹಣಕಾಸಿಗೆ ಸಂಬಂಧಿಸಿದ ಹಲವು ಬದಲಾವಣೆಗಳು ಏಪ್ರಿಲ್ ಒಂದರಿಂದ ಜಾರಿಗೆ ಬರಲಿವೆ. ಇವೆಲ್ಲವೂ ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರಬಲ್ಲ ವಿಚಾರಗಳು. ಏಪ್ರಿಲ್ 1ರಿಂದ ಏನೆಲ್ಲ ಬದಲಾವಣೆಗಳು ಆಗಲಿವೆ ಎಂಬುದರ ಸಮಗ್ರ ಚಿತ್ರಣ ಇಲ್ಲಿದೆ:
2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಮಿತಿಯಲ್ಲಿ ಬದಲಾವಣೆ ಮಾಡಲಾಗಿದೆ. ಇದರ ಪ್ರಕಾರ ತೆರಿಗೆದಾರರು ಎಷ್ಟೇ ಆದಾಯ ಗಳಿಸಿದರೂ ಮೊದಲ ₹4 ಲಕ್ಷದವರೆಗಿನ ಗಳಿಕೆಗೆ ತೆರಿಗೆ ಇಲ್ಲ. ವೈಯಕ್ತಿಕ ತೆರಿಗೆದಾರರ ₹12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಸಂಬಳದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ₹75 ಸಾವಿರ ಒಳಗೊಂಡು ₹12.75 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಹೊಸ ತೆರಿಗೆ ಪದ್ಧತಿ ಆಯ್ದುಕೊಳ್ಳುವವರಿಗಷ್ಟೇ ಈ ವಿನಾಯಿತಿ ಲಭ್ಯ.
ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರಡಿ ತೆರಿಗೆ ಸ್ಲ್ಯಾಬ್‌ಗಳು ಮತ್ತು ವಿನಾಯಿತಿಯು ಯಥಾಸ್ಥಿತಿಯಲ್ಲಿದೆ. ಸೆಕ್ಷನ್ 80ಸಿ ಅಡಿ ಮಕ್ಕಳ ಬೋಧನಾ ಶುಲ್ಕ, ಗೃಹ ಸಾಲದ ಮೇಲಿನ ಅಸಲು ತೀರುವಳಿ, ಸುಕನ್ಯಾ ಸಮೃದ್ಧಿ, ಜೀವ ವಿಮೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಐದು ವರ್ಷದ ತೆರಿಗೆ ಉಳಿತಾಯ ಸ್ಥಿರ ಠೇವಣಿ ಯೋಜನೆ ಇತ್ಯಾದಿ ಅಡಿ ತೆರಿಗೆ ವಿನಾಯಿತಿ ಪಡೆಯಬಹುದು.
ಮೂಲದಲ್ಲೇ ತೆರಿಗೆ ಕಡಿತದ ನಿಯಮಗಳನ್ನು ಸರಳೀಕರಿಸಲಾಗಿದೆ. ತೆರಿಗೆದಾರರಲ್ಲಿ ನಗದು ಹರಿವು ಹೆಚ್ಚಿಸುವುದು ಇದರ ಹಿಂದಿರುವ ಆಶಯ. ಹಿರಿಯ ನಾಗರಿಕರು ಬ್ಯಾಂಕ್‌ಗಳಲ್ಲಿ ಇಡುವ ಎಫ್‌ಡಿ, ಆರ್‌ಡಿ ಮತ್ತು ಇತರೆ ಠೇವಣಿ ಮೇಲಿನ ಟಿಡಿಎಸ್ ಕಡಿತದ ಮಿತಿಯನ್ನು ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಸಾಮಾನ್ಯ ನಾಗರಿಕರಿಗೆ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಮಿತಿಯನ್ನು ₹40 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಮಿತಿ ಮೀರಿದರೆ ಬ್ಯಾಂಕ್‌ಗಳು ಬಡ್ಡಿ ಕಡಿತ ಮಾಡಲಿವೆ.
ಆದಾಯ ತೆರಿಗೆಯ ಪರಿಷ್ಕೃತ ವಿವರ ಸಲ್ಲಿಕೆ (ಐಟಿಆರ್–ಯು) ಅವಧಿಯನ್ನು ವಿಸ್ತರಿಸಲಾಗಿದೆ. ಈ ಮೊದಲು ಮೌಲ್ಯಮಾಪನ ವರ್ಷದ ಹಿಂದಿನ 24 ತಿಂಗಳುಗಳಿಗೆ ಸೀಮಿತಗೊಂಡಿತ್ತು. ಇದನ್ನು 48 ತಿಂಗಳಿಗೆ ವಿಸ್ತರಿಸಲಾಗಿದೆ. ತೆರಿಗೆದಾರರು ತೆರಿಗೆ ಬಾಧ್ಯತೆ ಪೂರೈಸಿಕೊಳ್ಳಲು ಇದು ನೆರವಾಗಲಿದೆ.
2030ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ನವೋದ್ಯಮಗಳಿಗೆ ಶೇ 100ರಷ್ಟು ತೆರಿಗೆ ರಿಯಾಯಿತಿ ಘೋಷಿಸಲಾಗಿದೆ. ಅಂದರೆ ಹತ್ತು ವರ್ಷಗಳಲ್ಲಿ ಮೂರು ವರ್ಷದ ಆದಾಯಕ್ಕೆ ತೆರಿಗೆ ವಿನಾಯಿತಿ ಸಿಗಲಿದೆ. ನವೋದ್ಯಮ ವಲಯಕ್ಕೆ ಉತ್ತೇಜನ ನೀಡುವುದು ಇದರ ಉದ್ದೇಶ.
ಈ ಮೊದಲು ಒಂದು ಸ್ವಂತ ಮನೆ ಇದ್ದವರಿಗೆ ತೆರಿಗೆ ವಿನಾಯಿತಿ ಲಭಿಸುತ್ತಿತ್ತು. ಇದನ್ನು ಈಗ ಎರಡು ಮನೆಗಳಿಗೆ ವಿಸ್ತರಿಸಲಾಗಿದೆ. ಮನೆಯ ವಾರ್ಷಿಕ ಮೌಲ್ಯವನ್ನು ಶೂನ್ಯ ಎಂದು ಪರಿಗಣಿಸಲಾಗುತ್ತದೆ.
ಬಾಡಿಗೆ ಮೇಲಿನ ಟಿಡಿಎಸ್ ಮಿತಿಯು ಈ ಮೊದಲು ₹2.40 ಲಕ್ಷ ಇತ್ತು. ಇದನ್ನು ₹6 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಇದರಿಂದ ಮನೆ ಮಾಲೀಕರಿಗೆ ಅನುಕೂಲವಾಗಲಿದೆ.
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿಯೂ ಹಲವು ಬದಲಾವಣೆ ಮಾಡಲಾಗಿದೆ. ಇ-ವೇ ಬಿಲ್, ಇ-ಇನ್‌ವಾಯ್ಸ್, ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಮತ್ತು ವ್ಯಾಜ್ಯ ಇತ್ಯರ್ಥ ಪ್ರಕ್ರಿಯೆಗಳನ್ನು ಸರಳೀಕರಣ ಮಾಡಲಾಗಿದೆ.
ವಿಮಾ ಏಜೆಂಟ್‌ಗಳಿಗೆ ಈ ಮೊದಲು ₹15 ಸಾವಿರದವರೆಗಿನ ವಿಮಾ ಕಮಿಷನ್‌ಗೆ ಟಿಡಿಎಸ್ ವಿನಾಯಿತಿ ಇತ್ತು. ಸದ್ಯ ಇದನ್ನು ₹20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮ್ಯೂಚುವಲ್ ಫಂಡ್ ಮತ್ತು ಷೇರುಗಳಲ್ಲಿನ ಲಾಭಾಂಶ ಹಾಗೂ ಆದಾಯದ ಮೇಲಿನ ಟಿಡಿಎಸ್ ಮಿತಿಯನ್ನು ₹5 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್‌ನ (ಯುಲಿಪ್) ವಾರ್ಷಿಕ ಪ್ರೀಮಿಯಂ ಮಿತಿಯು ₹2.5 ಲಕ್ಷ ದಾಟಿದರೆ ಅದನ್ನು ಬಂಡವಾಳ ಲಾಭವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 112ಎ ಅಡಿ ತೆರಿಗೆ ಅನ್ವಯವಾಗಲಿದೆ.
ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರೇ ಪಿಂಚಣಿ ಖಾತೆ ತೆರೆದು ಹಣ ಉಳಿತಾಯ ಮಾಡುವ ಯೋಜನೆ ಇದಾಗಿದೆ. ಬಜೆಟ್ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇದರಡಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ಕಡಿತದ ಪ್ರಯೋಜನ ಕುರಿತು ಪ್ರಸ್ತಾಪಿಸಿದ್ದಾರೆ. ಸಂಬಳ ಪಡೆಯುವ ನೌಕರರು ಮತ್ತು ಇತರೆ ತೆರಿಗೆದಾರರಿಗೆ ₹50 ಸಾವಿರದವರೆಗೆ ಹೆಚ್ಚುವರಿ ತೆರಿಗೆ ಕಡಿತ ಪ್ರಯೋಜನ ಲಭಿಸಲಿದೆ.
ಮಾರುತಿ ಸುಜುಕಿ ಇಂಡಿಯಾ (ಶೇ 4), ಹುಂಡೈ ಮೋಟರ್ ಇಂಡಿಯಾ (ಶೇ 3), ಬಿಎಂಡಬ್ಲ್ಯು (ಶೇ 3), ರೆನೊ ಇಂಡಿಯಾ (ಶೇ 2) ಟಾಟಾ ಮೋಟರ್ಸ್ (ಶೇ 2) ಕಾರುಗಳ ಬೆಲೆಯು ಹೆಚ್ಚಳವಾಗಲಿದೆ. ಕಿಯಾ ಇಂಡಿಯಾ ಮತ್ತು ಹೋಂಡಾ ಕಾರ್ಸ್ ಇಂಡಿಯಾ ಕೂಡ ದರ ಹೆಚ್ಚಳಕ್ಕೆ ನಿರ್ಧರಿಸಿವೆ.
ಎಸ್‌ಬಿಐ ಕಾರ್ಡ್ ತನ್ನ ರಿವಾರ್ಡ್ ಪಾಯಿಂಟ್‌ಗಳಲ್ಲಿ ಹಲವು ಬದಲಾವಣೆ ಮಾಡಿದೆ. ಎಸ್‌ಬಿಐ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡುವ ಪ್ರತಿ ₹100ಕ್ಕೆ 15ರಿಂದ 5ಕ್ಕೆ ರಿವಾರ್ಡ್ ಪಾಯಿಂಟ್ ತಗ್ಗಿಸಿದೆ. ಏರ್ ಇಂಡಿಯಾ ಎಸ್‌ಬಿಐ ಸಿಗ್ನೇಚರ್ ಕ್ರೆಡಿಟ್ ಕಾರ್ಡ್ ಬಳಸಿ ಖರ್ಚು ಮಾಡುವ ಪ್ರತಿ ₹100ಕ್ಕೆ ಲಭಿಸುತ್ತಿದ್ದ ರಿವಾರ್ಡ್ ಪಾಯಿಂಟ್‌ಗಳನ್ನು 30ರಿಂದ 10ಕ್ಕೆ ಇಳಿಸಿದೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಸ್‌ಬಿಐನ ಕ್ಲಬ್ ವಿಸ್ತಾರಾ ಕ್ರೆಡಿಟ್ ಕಾರ್ಡ್, ಕ್ಲಬ್ ವಿಸ್ತಾರಾ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕಾರ್ಡ್‌ನ ಪ್ರಯೋಜನಗಳು ಸ್ಥಗಿತಗೊಳ್ಳಲಿವೆ. ಆದರೂ, ಈ ಕಾರ್ಡ್ ಬಳಸುವ ಗ್ರಾಹಕರಿಗೆ 2026ರ ಮಾರ್ಚ್ 31ರ ವರೆಗೆ ಮಹಾರಾಜ ಪಾಯಿಂಟ್ ದೊರೆಯಲಿದೆ.
ಏಕೀಕೃತ ಪಾವತಿ ವ್ಯವಸ್ಥೆಯ (ಯುಪಿಐ) ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮಂಗಳವಾರದಿಂದ ಜಾರಿಗೆ ಬರಲಿವೆ. ಅದರ ಪ್ರಕಾರ, ನಿಷ್ಕ್ರಿಯವಾಗಿರುವ ಮೊಬೈಲ್ ಸಂಖ್ಯೆಯಿಂದ ಯುಪಿಐ ಪಾವತಿ ಇನ್ನು ಮುಂದೆ ಸಾಧ್ಯವಿಲ್ಲ. ಯುಪಿಐ ಖಾತೆಗೆ ಜೋಡಿಸಿರುವ ಮೊಬೈಲ್ ಸಂಖ್ಯೆ ದೀರ್ಘ ಸಮಯದಿಂದ ನಿಷ್ಕ್ರಿಯವಾಗಿರುವುದು ಹಣಕಾಸು ಭದ್ರತೆಗೆ ಅಪಾಯಕಾರಿಯಾಗಬಹುದು. ಹೀಗಾಗಿ, ಅಂತಹ ಮೊಬೈಲ್ ಸಂಖ್ಯೆಗಳನ್ನು ಜೋಡಿಸಿರುವ ಯುಪಿಐ ಪಾವತಿಗೆ ಅವಕಾಶ ನೀಡದಂತೆ ಎನ್‌ಪಿಸಿಐ ಬ್ಯಾಂಕುಗಳು ಸೇರಿದಂತೆ ಫೋನ್‌ಪೇ, ಗೂಗಲ್‌ಪೇನಂತಹ ಯುಪಿಐ ಪಾವತಿ ಒದಗಿಸುವ ಸಂಸ್ಥೆಗಳಿಗೆ ಸೂಚಿಸಿದೆ.
ಜೂನ್ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಪಿಪಿಎಫ್, ಎನ್‌ಎಸ್‌ಸಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಕೇಂದ್ರ ಸರ್ಕಾರವು ಯಥಾಸ್ಥಿತಿ ಕಾಯ್ದುಕೊಂಡಿದೆ. 2024–25ರ ಆರ್ಥಿಕ ವರ್ಷದ ನಾಲ್ಕು ತ್ರೈಮಾಸಿಕದಲ್ಲೂ ಇದೇ ದರವಿತ್ತು. ಈ ಮೂಲಕ 5ನೇ ತ್ರೈಮಾಸಿಕದಲ್ಲೂ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ದಿಮೆಗಳ (ಎಂಎಸ್‌ಎಂಇ) ಹೂಡಿಕೆ ಮತ್ತು ವಹಿವಾಟು ಮಿತಿಯನ್ನು ಕ್ರಮವಾಗಿ ಎರಡೂವರೆ ಪಟ್ಟು ಮತ್ತು ಎರಡು ಪಟ್ಟು ಹೆಚ್ಚಿಸಲಾಗಿದೆ.
ಗ್ರಾಹಕರು ಎಟಿಎಂನಿಂದ ಹಣ ಪಡೆಯುವುದಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಬ್ಯಾಂಕ್‌ಗಳು ಹೆಚ್ಚಿಸಲಿವೆ. ಪ್ರಸ್ತುತ ಪ್ರತಿ ವಹಿವಾಟಿಗೆ ₹21 ಶುಲ್ಕ ವಿಧಿಸಲಾಗುತ್ತಿದೆ. ಇದನ್ನು ಗರಿಷ್ಠ ₹23ಕ್ಕೆ ಹೆಚ್ಚಿಸಲಾಗಿದೆ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.