ADVERTISEMENT

ಸುಲಭ ವಹಿವಾಟಿಗೆ ಇ–ಇನ್‌ವಾಯ್ಸ್‌

ಜಿಎಸ್‌ಟಿ ನೆಟ್‌ವರ್ಕ್‌ನ ಸಿಇಒ ಪ್ರಕಾಶ್‌ ಕುಮಾರ್ ಹೇಳಿಕೆ

ಪಿಟಿಐ
Published 14 ಫೆಬ್ರುವರಿ 2020, 17:39 IST
Last Updated 14 ಫೆಬ್ರುವರಿ 2020, 17:39 IST
   

ನವದೆಹಲಿ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ಸ್‌ ಸಲ್ಲಿಸುವ ಹೊಸ ವಿಧಾನ ಮತ್ತು ಇ–ಇನ್‌ವಾಯ್ಸ್‌ ಸೌಲಭ್ಯಗಳು ವಹಿವಾಟು ಸುಲಭಗೊಳಿಸಲು ನೆರವಾಗಲಿವೆ’ ಎಂದು ಜಿಎಸ್‌ಟಿ ನೆಟ್‌ವರ್ಕ್‌ನ ಸಿಇಒ ಪ್ರಕಾಶ್‌ ಕುಮಾರ್ ಹೇಳಿದ್ದಾರೆ.

‘ಜಿಎಸ್‌ಟಿಯ ಸಮಗ್ರ ಮಾಹಿತಿ ನೀಡಲು ಮತ್ತು ಸುಲಲಿತವಾಗಿ ವಹಿವಾಟು ನಡೆಸಲು ಇ–ಇನ್‌ವಾಯ್ಸ್‌ ನೆರವಾಗುತ್ತದೆ. ಮ್ಯಾನುವಲ್‌ ದತ್ತಾಂಶ ದಾಖಲಿಸುವಾಗ ತಪ್ಪುಗಳು ಘಟಿಸುವುದನ್ನು ಇ–ಇನ್‌ವಾಯ್ಸ್‌ ತಪ್ಪಿಸಲಿದೆ’ ಎಂದು ಕುಮಾರ್ ಹೇಳಿದ್ದಾರೆ. ಇಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ಕೈಯಿಂದ ವಿವರಗಳನ್ನು (ಮ್ಯಾನುವಲ್‌) ಭರ್ತಿ ಮಾಡುವಾಗ ತಪ್ಪು ಅಂಕಿ ಅಂಶ ದಾಖಲಿಸಲು ಅವಕಾಶ ಇರುತ್ತದೆ. ಇಂತಹ ಸಾಧ್ಯತೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವ ಉದ್ದೇಶಕ್ಕೆ ತೆರಿಗೆದಾರರು ನಡೆಸುವ ವಹಿವಾಟಿನ ಪ್ರಕ್ರಿಯೆಯನ್ನು ಡಿಜಿಟಲೀಕರಣಕ್ಕೆ ಒಳಪಡಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಉದ್ಯಮಿಗಳ ಮಧ್ಯೆ ನಡೆಯುವ ವಹಿವಾಟನ್ನು (ಬಿಟುಬಿ) ಜಿಎಸ್‌ಟಿಯ ಬೆನ್ನೆಲುಬಾದ ಜಿಎಸ್‌ಟಿ ನೆಟ್‌ವರ್ಕ್‌ನಲ್ಲಿ ಇ–ಇನ್‌ವಾಯ್ಸ್‌ ಮೂಲಕ ದೃಢೀಕರಿಸಲಾಗುವುದು. ಡಿಜಿಟಲ್‌ ಆರ್ಥಿಕತೆಯತ್ತ ಸಾಗುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ಕ್ರಮ ಇದಾಗಿದೆ. ಜಿಎಸ್‌ಟಿಎನ್‌ ಕಾರ್ಯನಿರ್ವಹಣೆಯಲ್ಲಿ ದಿನೇ ದಿನೇ ಸುಧಾರಣೆ ಕಂಡು ಬರುತ್ತಿದೆ’ ಎಂದು ಪಂಜಾಬ್‌ ಹರಿಯಾಣ ಮತ್ತು ದೆಹಲಿ ವಾಣಿಜ್ಯೋದ್ಯಮ ಸಂಘದ (ಪಿಎಚ್‌ಡಿ ಚೇಂಬರ್‌) ಪರೋಕ್ಷ ತೆರಿಗೆ ಸಮಿತಿ ಅಧ್ಯಕ್ಷ ಎನ್‌. ಕೆ. ಗುಪ್ತಾ ಹೇಳಿದ್ದಾರೆ.

‘ಇ–ಇನ್‌ವಾಯ್ಸ್‌, ಎಲೆಕ್ಟ್ರಾನಿಕ್‌ ಬಿಲ್ಲಿಂಗ್‌ನ ಭವಿಷ್ಯದ ಸಾಧನವಾಗಿದೆ. ವಿದೇಶಗಳಲ್ಲಿ ಅನೇಕ ದೇಶಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.