ADVERTISEMENT

ಎನ್‌ಎಚ್‌ಎಐನಿಂದ ₹56 ಸಾವಿರ ಕೋಟಿ ಸಾಲ ಪೂರ್ವ ಪಾವತಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 14:40 IST
Last Updated 5 ಜನವರಿ 2025, 14:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್ಎಐ) ₹56 ಸಾವಿರ ಕೋಟಿ ಸಾಲವನ್ನು ಪೂರ್ವ ಪಾವತಿ ಮಾಡಿದೆ. ಇದರಿಂದ ಪ್ರಾಧಿಕಾರಕ್ಕೆ ₹1,200 ಕೋಟಿ ಬಡ್ಡಿ ಉಳಿತಾಯವಾಗಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಆರಂಭದಲ್ಲಿ ಪ್ರಾಧಿಕಾರದ ಸಾಲದ ಮೊತ್ತವು ₹3.35 ಲಕ್ಷ ಕೋಟಿ ಇತ್ತು. ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ₹2.76 ಲಕ್ಷ ಕೋಟಿಗೆ ಇಳಿದಿದೆ ಎಂದು ಹೇಳಿದ್ದಾರೆ.

ಪ್ರಾಧಿಕಾರವು ಹೆದ್ದಾರಿಗಳ ಅಭಿವೃದ್ಧಿಗಾಗಿ ಮೂಲಸೌಕರ್ಯ ಟ್ರಸ್ಟ್‌ ಮೂಲಕ ಹಣ ಸಂಗ್ರಹಿಸುತ್ತದೆ. ಇದರಡಿ ಸಂಗ್ರಹವಾದ ₹15,700 ಕೋಟಿಯನ್ನು ಸಾಲ ಪೂರ್ವ ಪಾವತಿ ಮಾಡಿದೆ ಎಂದು ಹೇಳಿದ್ದಾರೆ.

ADVERTISEMENT

ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ ₹30 ಸಾವಿರ ಕೋಟಿ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ (ಎಸ್‌ಬಿಐ) ₹10 ಸಾವಿರ ಕೋಟಿ ಸಾಲ ಪಡೆಯಲಾಗಿತ್ತು. ಈ ಸಾಲಕ್ಕೆ ಹೆಚ್ಚಿನ ಬಡ್ಡಿ ನೀಡಬೇಕಿತ್ತು. ಹಾಗಾಗಿ, ಈ ಸಾಲವನ್ನು ಪೂರ್ವ ಪಾವತಿ ಮಾಡಲಾಗಿದೆ. ಆ ಮೂಲಕ ಪ್ರಾಧಿಕಾರದ ಸಾಲದ ಹೊಣೆಗಾರಿಕೆಯು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

2024–25ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಪ್ರಾಧಿಕಾರಕ್ಕೆ ₹1.68 ಲಕ್ಷ ಕೋಟಿ ಅನುದಾನವನ್ನು ಹಂಚಿಕೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.