ADVERTISEMENT

ರಾಜ್ಯದ ಮಾರುಕಟ್ಟೆ ಮೇಲೆ ನಿಪ್ಪೊನ್ ಪೇಂಟ್‌ ಕಣ್ಣು

​ಕೇಶವ ಜಿ.ಝಿಂಗಾಡೆ
Published 8 ಅಕ್ಟೋಬರ್ 2019, 19:30 IST
Last Updated 8 ಅಕ್ಟೋಬರ್ 2019, 19:30 IST
ಚೆನ್ನೈನ ಶ್ರೀಪೆರಂಬುದೂರಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ತಯಾರಿಕಾ ಘಟಕ
ಚೆನ್ನೈನ ಶ್ರೀಪೆರಂಬುದೂರಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ತಯಾರಿಕಾ ಘಟಕ   

ಜಾಗತಿಕವಾಗಿ ಪೇಂಟ್‌ ತಯಾರಿಕೆಯಲ್ಲಿ 139 ವರ್ಷಗಳಷ್ಟು ಅನುಭವ ಹೊಂದಿರುವ ಜಪಾನಿನ ನಿಪ್ಪೊನ್ ಪೇಂಟ್‌, ಈಗ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಿಸಲು ಗಮನ ಕೇಂದ್ರೀಕರಿಸಿದೆ. ಜಾಗತಿಕ ಪೇಂಟಿಂಗ್ ಉದ್ದಿಮೆಯಲ್ಲಿ 4ನೆ ಅತಿದೊಡ್ಡ ಮತ್ತು ಏಷ್ಯಾದ ಅತಿದೊಡ್ಡ ಕಂಪನಿಯಾಗಿದೆ. ಸದ್ಯಕ್ಕೆ ದೇಶದ ಮುಂಚೂಣಿ 5ನೆ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಗೆ 13 ವರ್ಷಗಳ ಹಿಂದೆ ಪ್ರವೇಶಿಸಿರುವ ಕಂಪನಿಯು ತನ್ನ ವೈವಿಧ್ಯಮಯ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಮೂಲಕ ಗ್ರಾಹಕರ ಮನಕ್ಕೆ ಲಗ್ಗೆ ಹಾಕಲು ಹೊರಟಿದೆ. ತಮಿಳುನಾಡಿನ ಜನರ ಅಚ್ಚುಮೆಚ್ಚಿನ ಬ್ರ್ಯಾಂಡ್‌ ಆಗಿ ಮನ್ನಣೆ ಪಡೆದಿದೆ. ಕರ್ನಾಟಕದಲ್ಲಿಯೂ ಇದೇ ಜನಪ್ರಿಯತೆ ಗಳಿಸಲು ಹೊರಟಿದೆ. ರಾಜ್ಯದ ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ಕೈವಶ ಮಾಡಿಕೊಳ್ಳಲು ಆಕ್ರಮಣಕಾರಿ ಮಾರಾಟ ನೀತಿ ಅಳವಡಿಸಿಕೊಳ್ಳಲು ಮುಂದಾಗಿದೆ. 2006ರಿಂದಲೇ ಭಾರತದಲ್ಲಿ ವಹಿವಾಟು ಆರಂಭಿಸಿರುವ ಕಂಪನಿಯು, ಈಗ ರಾಜ್ಯದ ಪೇಂಟ್ ಮಾರುಕಟ್ಟೆಯಲ್ಲಿ ತನ್ನ ಪಾಲು ಹೆಚ್ಚಿಸಿಕೊಳ್ಳಲು ಉದ್ದೇಶಿಸಿದೆ.

‘ತಮಿಳುನಾಡಿನ ಜನಪ್ರಿಯತೆಯ ಕಾರಣಕ್ಕೆ ಕರ್ನಾಟಕದಿಂದ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಹೀಗಾಗಿ ಇಲ್ಲಿಯೂ ಮಾರುಕಟ್ಟೆ ವಿಸ್ತರಿಸಲು ಉದ್ದೇಶಿಸಲಾಗಿದೆ' ಎಂದು ಕಂಪನಿಯ ಅಲಂಕಾರಿಕ ಪೇಂಟ್‌ ವಿಭಾಗದ ಮಾರುಕಟ್ಟೆ ನಿರ್ದೇಶಕ ಮಾರ್ಕ್‌ ಟಿಟಸ್‌ ಅವರು, ಚೆನ್ನೈ ಬಳಿಯ ಶ್ರೀಪೆರಂಬುದೂರಿನಲ್ಲಿನ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದ ಕರ್ನಾಟಕದ ಪತ್ರಕರ್ತರ ನಿಯೋಗಕ್ಕೆ ಮಾಹಿತಿ ನೀಡಿದರು.

‘ಬಣ್ಣಗಳ ಅಭಿರುಚಿ ಆಯ್ಕೆಯು ಪ್ರತಿ 100 ಕಿ. ಮೀಗೆ ಬದಲಾಗುತ್ತ ಹೋಗುತ್ತದೆ. ಕರ್ನಾಟಕದಲ್ಲಿಯೂ ವಿಭಿನ್ನ ಅಭಿರುಚಿಯ ಗ್ರಾಹಕರ ಅಗತ್ಯಗಳನ್ನು ಈಡೇರಿಸಲಾಗುವುದು. ಪೇಂಟ್‌ ಉದ್ದಿಮೆಯು ಇತರ ಎಫ್‌ಎಂಸಿಜಿ ಉತ್ಪನ್ನಗಳ ಹಾಗೆ ಅಲ್ಲ. ಬ್ರ್ಯಾಂಡ್‌ ಜನಪ್ರಿಯತೆಗೊಳಿಸುವುದು ತುಂಬ ಪ್ರಯಾಸದ ಕೆಲಸವಾಗಿದೆ. ರಾಜ್ಯದಲ್ಲಿನ ಹೊಸ ತಲೆಮಾರಿನ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ವಹಿವಾಟು ವಿಸ್ತರಿಸಲು ಉದ್ದೇಶಿಸಿದೆ. ಅಂತರರಾಷ್ಟ್ರೀಯ ಗುಣಮಟ್ಟದ, ಅತ್ಯಾಧುನಿಕ ತಂತ್ರಜ್ಞಾನ, ಪರಿಸರ ಸ್ನೇಹಿ ಉತ್ಪನ್ನಗಳು ಕರ್ನಾಟಕದ ಗ್ರಾಹಕರಿಗೆ ಮೆಚ್ಚುಗೆಯಾಗಲಿವೆ. ಕಂಪನಿಯ ಪೇಂಟಿಂಗ್‌ ಉತ್ಪನ್ನಗಳೆಲ್ಲ ಪರಿಸರ ಸ್ನೇಹಿಯಾಗಿವೆ. ಇತರ ಕಂಪನಿಗಳಿಗೆ ಹೋಲಿಸಿದರೆ ಡೀಲರ್‌ಗಳ ಕಮಿಷನ್‌ ಹೆಚ್ಚಿಗೆ ಇದೆ’ ಎಂದೂ ಅವರು ಹೇಳುತ್ತಾರೆ.

ADVERTISEMENT

ಏಷ್ಯಾದ ನಂಬರ್‌ ಒನ್‌ ಪೇಂಟ್‌ ತಯಾರಿಸುವ ಕಂಪನಿಯಾಗಿರುವ ನಿಪ್ಪೊನ್‌ ಪೇಂಟ್, ಪರಿಸರ ಸ್ನೇಹಿ ಪೇಂಟ್‌ ಉತ್ಪನ್ನಗಳಿಗಾಗಿ ಭಾರತೀಯ ಕೈಗಾರಿಕಾ ಒಕ್ಕೂಟದ ‘ಗ್ರೀನ್‌ಪ್ರೊ’ ಪ್ರಮಾಣಪತ್ರ ಪಡೆದುಕೊಂಡಿರುವ ಮೊದಲ ಪೇಂಟ್‌ ಕಂಪನಿಯಾಗಿದೆ. ಕೆಲ ವರ್ಷಗಳ ಹಿಂದಿನವರೆಗೆ ಪೇಂಟಿಂಗ್‌ ಎಂದರೆ ಕಟ್ಟಡದ ಒಳ ಮತ್ತು ಹೊರಭಾಗಕ್ಕೆ ಬಣ್ಣ ಬಳಿಯುವುದು, ಸುಂದರವಾಗಿ ಕಾಣುವಂತೆ ಮಾಡುವುದು, ಕಟ್ಟಡಗಳಿಗೆ ಕೆಲಮಟ್ಟಿಗೆ ರಕ್ಷಣೆ ನೀಡುವುದು ಎಂದಷ್ಟೇ ಅಷ್ಟೇ ಆಗಿತ್ತು. ಪೇಂಟಿಂಗ್‌ ಮಾರುಕಟ್ಟೆಗೆ ಜಪಾನಿನ ನಿಪ್ಪೊನ್‌ ಪೇಂಟ್‌ ಪ್ರವೇಶದ ನಂತರ ಈ ಪರಿಕಲ್ಪನೆಗೆ ಭಿನ್ನ ಆಯಾಮ ದೊರೆತಿದೆ. ಕಂಪನಿಯು ಪೇಂಟಿಂಗ್‌ನಲ್ಲಿ ಅನೇಕ ಹೊಸತನಗಳನ್ನು ಅಳವಡಿಸಿಕೊಂಡಿದೆ. ಆ್ಯಂಟಿ ಬ್ಯಾಕ್ಟಿರಿಯಾ, ಆ್ಯಂಟಿವೈರಲ್‌, 15 ವರ್ಷಗಳ ವಾರಂಟಿ, ಜಲ ನಿರೋಧಕ ಪೇಂಟ್ಸ್‌ ಮುಂತಾದವು ಇದರ ವಿಶೇಷತೆಗಳಾಗಿವೆ.

(ವರದಿಗಾರ, ಕಂಪನಿಯ ಆಹ್ವಾನದ ಮೇರೆಗೆ ಚೆನ್ನೈಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.