ನವದೆಹಲಿ: ಮಧ್ಯಮ ಪ್ರಮಾಣದ ಉದ್ಯಮಗಳನ್ನು ದೇಶದ ಆರ್ಥಿಕತೆಯ ಭವಿಷ್ಯದ ಬೆಳವಣಿಗೆಯ ಎಂಜಿನ್‌ಗಳಾಗಿ ಪರಿವರ್ತಿಸಲು ಸೂಕ್ತ ಹಣಕಾಸು ಸಾಧನಗಳು, ತಂತ್ರಜ್ಞಾನ ಸಂಯೋಜನೆ ಮತ್ತು ಕೇಂದ್ರೀಕೃತ ಡಿಜಿಟಲ್ ಪೋರ್ಟಲ್‌ನ ಅಗತ್ಯವಿದೆ ಎಂದು ನೀತಿ ಆಯೋಗ ಸರ್ಕಾರಕ್ಕೆ ಸೋಮವಾರ ಶಿಫಾರಸು ಮಾಡಿದೆ.
ಮಧ್ಯಮ ಪ್ರಮಾಣದ ಉದ್ಯಮಗಳು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು, ಉದ್ಯಮದ ವಹಿವಾಟಿಗೆ ಮಾರುಕಟ್ಟೆ ದರದಲ್ಲಿ ₹5 ಕೋಟಿ ಸಾಲ ಸೌಲಭ್ಯ ನೀಡಬೇಕಿದೆ. ಚಿಲ್ಲರೆ ಬ್ಯಾಂಕ್‌ಗಳ ಮೂಲಕ ತ್ವರಿತವಾಗಿ ವಿತರಣಾ ಕಾರ್ಯವಿಧಾನಗಳನ್ನು ಪರಿಚಯಿಸಲು ಶಿಫಾರಸು ಮಾಡಲಾಗಿದೆ. ಇದನ್ನು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ (ಎಂಎಸ್‌ಎಂಇ) ಸಚಿವಾಲಯವು ಮೇಲ್ವಿಚಾರಣೆ ಮಾಡಬೇಕಿದೆ ಎಂದು ತಿಳಿಸಿದೆ.
ಪ್ರಸ್ತುತ ಇರುವ ತಂತ್ರಜ್ಞಾನ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕಿದೆ. ಎಂಎಸ್‌ಎಂಇ ಸಚಿವಾಲಯವು ಇದಕ್ಕಾಗಿ ಮೀಸಲಾದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವನ್ನು ಸ್ಥಾಪಿಸಬೇಕಿದೆ ಎಂದು ಸೇರಿ ಆಯೋಗವು ಹಲವು ಶಿಫಾರಸು ಮಾಡಿದೆ.
ಎಂಎಸ್‌ಎಂಇ ವಲಯವು ದೇಶದ ಒಟ್ಟು ಜಿಡಿಪಿಗೆ ಶೇ 29ರಷ್ಟನ್ನು ಕೊಡುಗೆ ನೀಡುತ್ತದೆ. ರಫ್ತು ಶೇ 40ರಷ್ಟಿದ್ದು, ಶೇ 60ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.