ADVERTISEMENT

ಬಾಗಲಕೋಟೆ | ಶೈತ್ಯಾಗಾರ ಕೊರತೆ; ದಾಖಲೆ ಬೆಲೆಯಿದ್ದರೂ ರೈತರ ಬಳಿಯಿಲ್ಲ ಒಣದ್ರಾಕ್ಷಿ

​ಪ್ರಜಾವಾಣಿ ವಾರ್ತೆ
Published 3 ಮೇ 2025, 23:46 IST
Last Updated 3 ಮೇ 2025, 23:46 IST
   

ಬಾಗಲಕೋಟೆ: ಜಿಲ್ಲೆಯಲ್ಲಿ ನೀರಿನ ಅಭಾವ, ಹವಾಮಾನದ ಏರುಪೇರಿನಿಂದ ದ್ರಾಕ್ಷಿ ಇಳುವರಿಯಲ್ಲಿ ಕುಸಿತವಾಗಿದೆ. ಇದರ ಪರಿಣಾಮ ಒಣದ್ರಾಕ್ಷಿಗೆ ದಾಖಲೆ ಬೆಲೆ ದೊರೆಯುತ್ತಿದೆ. ಆದರೆ, ರೈತರ ಬಳಿ ಒಣದ್ರಾಕ್ಷಿಯಿಲ್ಲ.

ಜಿಲ್ಲೆಯ 3,809 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಅದರಲ್ಲಿ ಶೇ 80ರಷ್ಟು ಒಣದ್ರಾಕ್ಷಿ ಮಾಡಲಾಗುತ್ತದೆ. ಶೇ 70ರಷ್ಟು ರೈತರ ಬೆಳೆ ಹಾಳಾಗಿದೆ. ಉಳಿದ ರೈತರ ಬೆಳೆಗಳಲ್ಲೂ ಶೇ 50ರಷ್ಟು ಮಾತ್ರ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ದ್ರಾಕ್ಷಿಗೆ ಸರಾಸರಿ (ಮೂರು ಗ್ರೇಡ್‌ ಮಾಡಲಾಗುತ್ತದೆ) ₹180 ರಿಂದ ₹300ರ ವರೆಗೆ ಬೆಲೆ ದೊರೆಯುತ್ತಿದೆ. ಗ್ರೇಡ್‌ ಒನ್‌ ಪ್ರತಿ ಕೆ.ಜಿ ದ್ರಾಕ್ಷಿಗೆ ಈ ಬಾರಿ ₹500ರ ವರೆಗೂ ಬೆಲೆ ದೊರೆತಿದೆ.

ಕೋವಿಡ್‌ಗಿಂತ ಮುಂಚೆ ರೈತರಿಗೆ ಪ್ರತಿ ಕೆ.ಜಿಗೆ ₹150ರಿಂದ ₹190ರ ವರೆಗೆ ಬೆಲೆ ದೊರೆಯುತ್ತಿತ್ತು. ಕೋವಿಡ್‌ ನಂತರದಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಏರುಪೇರಾಯಿತು. ಕೆ.ಜಿ ದ್ರಾಕ್ಷಿ ಬೆಲೆ ₹100 ರಿಂದ ₹120ಕ್ಕೆ ಕುಸಿಯಿತು. ಸತತ ಬೆಲೆ ಇಳಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದರು. ಶೇ 10ರಷ್ಟು ರೈತರು ದ್ರಾಕ್ಷಿ ಬೆಳೆಯುವುದರಿಂದ ದೂರ ಸರಿದಿದ್ದಾರೆ.

ADVERTISEMENT

ಸೌಲಭ್ಯದ ಕೊರತೆ:

ರೈತರು ಆರ್ಥಿಕವಾಗಿ ಸಬಲರಲ್ಲದ ಕಾರಣ ಬೆಲೆ ಕುಸಿತವಾಗಿದ್ದರೂ ಮಾರುತ್ತಾರೆ. ಅನುಕೂಲವಿದ್ದರೂ ಸಂರಕ್ಷಿಸಿಡಬೇಕು ಎಂದರೆ ಶೈತ್ಯಾಗಾರಗಳಿಲ್ಲ. ಶೈತ್ಯಾಗಾರದಲ್ಲಿ ಇಡಲು ಮಹಾರಾಷ್ಟ್ರದ ಪಂಢರಪುರ, ತಾಸಗಾಂವ್‌ಗೆ ಒಯ್ಯಬೇಕು.

‘ಒಂದು ಟನ್ ದ್ರಾಕ್ಷಿಗೆ ₹600 ಕೊಡಬೇಕು. ಸಾಗಣೆ ವೆಚ್ಚ, ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಖರ್ಚು ಸೇರಿ ಉತ್ಪಾದನೆ ವೆಚ್ಚ ಹೆಚ್ಚಾಗುತ್ತದೆ. ಇಲ್ಲಿಯೇ ಶೈತ್ಯಾಗಾರ ಸ್ಥಾಪಿಸಲು ಸರ್ಕಾರ ಮುಂದಾಗಬೇಕು’ ಎಂದು ಕಾಜಿಬೀಳಗಿಯ ರೈತ ಚನ್ನಪ್ಪ ಚನ್ನವೀರ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ಕೂಡ ಇಲ್ಲ. ಮಹಾರಾಷ್ಟ್ರದ ತಾಸಗಾಂವ್‌ಗೆ ಒಯ್ದು ಮಾರಬೇಕು. ಇಲ್ಲಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂಬುದು ಅವರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.