ADVERTISEMENT

ದೇಶದಲ್ಲಿ ಅಗತ್ಯ ಔಷಧ ಬೆಲೆ ಏರಿಕೆ ಇಲ್ಲ: ಮನ್ಸುಕ್‌ ಮಾಂಡವೀಯ

ಕೇಂದ್ರ ರಾಸಾಯನಿಕ, ರಸಗೊಬ್ಬರ ಸಚಿವ ಮನ್ಸುಕ್‌ ಮಾಂಡವೀಯ ಭರವಸೆ

ಪಿಟಿಐ
Published 4 ಏಪ್ರಿಲ್ 2024, 15:41 IST
Last Updated 4 ಏಪ್ರಿಲ್ 2024, 15:41 IST
<div class="paragraphs"><p>ಮನ್ಸುಕ್‌ ಮಾಂಡವೀಯ </p></div>

ಮನ್ಸುಕ್‌ ಮಾಂಡವೀಯ

   

–ಪಿಟಿಐ ಚಿತ್ರ

ನವದೆಹಲಿ: ‘ದೇಶದಲ್ಲಿ ಸಗಟು ಹಣದುಬ್ಬರವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಾಗಾಗಿ, 2024–25ನೇ ಆರ್ಥಿಕ ವರ್ಷದಲ್ಲಿ ಅಗತ್ಯ ಔಷಧಗಳ ಬೆಲೆ ಏರಿಕೆ ಮಾಡುವುದಿಲ್ಲ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಕ್‌ ಮಾಂಡವೀಯ ಭರವಸೆ ನೀಡಿದ್ದಾರೆ.

ADVERTISEMENT

ಪಿಟಿಐ ಸಂ‍ಪಾದಕರ ಜೊತೆ ಗುರುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಅಗತ್ಯ ಔಷಧಗಳ ಬೆಲೆಯನ್ನು ಹೆಚ್ಚಿಸಲಿದೆ ಎಂಬುದು ಶುದ್ಧ ಸುಳ್ಳು’ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (ಎನ್‌ಪಿಪಿಎ) ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರದ ಮೇಲೆ ಪ್ರತಿವರ್ಷವು ಶೆಡ್ಯೂಲ್ಡ್‌ ಔಷಧಗಳ ಬೆಲೆಯನ್ನು ಪರಿಷ್ಕರಿಸಲಿದೆ. ಸೂಚ್ಯಂಕ ಆಧಾರದ ಮೇಲೆಯೇ ಅಗತ್ಯ ಔಷಧಗಳ ಬೆಲೆ ನಿಯಂತ್ರಿಸುವ ಜೊತೆಗೆ ದರವನ್ನೂ ನಿಗದಿಪಡಿಸಲಿದೆ ಎಂದು ಹೇಳಿದರು.

ಸಗಟು ಹಣದುಬ್ಬರ ಏರಿಕೆಯಾದಾಗ ಔಷಧಗಳ ಬೆಲೆ ಏರಿಕೆಯಾಗುವುದು ಸಹಜ. ಇಳಿಕೆಯಾದ ವೇಳೆ ಬೆಲೆಯೂ ಕಡಿಮೆಯಾಗಲಿದೆ. ಈ ವರ್ಷ ಹಣದುಬ್ಬರವು ಶೇ 0.005ರಷ್ಟಿದೆ. ಹಾಗಾಗಿ, ಔಷಧ ಕಂಪನಿಗಳು ದರ ಏರಿಕೆಗೆ ಮುಂದಾಗುವುದಿಲ್ಲ. ಇದು ಪ್ರಧಾನಿ ಮೋದಿ ಅವರ ಗ್ಯಾರಂಟಿಯಾಗಿದೆ ಎಂದರು.

2013ರ ಔಷಧ ಬೆಲೆ ನಿಯಂತ್ರಣ ಆದೇಶಗಳ ಅನ್ವಯ ಔಷಧಗಳನ್ನು ಶೆಡ್ಯೂಲ್ಡ್‌ ಹಾಗೂ ನಾನ್‌ ಶೆಡ್ಯೂಲ್ಡ್‌ ಎಂದು ವರ್ಗೀಕರಿಸಲಾಗಿದೆ. ಶೆಡ್ಯೂಲ್ಡ್‌ 1ರ ಪಟ್ಟಿಯಲ್ಲಿ  ಅಗತ್ಯ ಔಷಧಗಳಿವೆ. ತಯಾರಕರಿಗೆ ನಾನ್‌ ಶೆಡ್ಯೂಲ್ಡ್‌ ಪಟ್ಟಿಯಲ್ಲಿರುವ ಔಷಧಗಳ ಬೆಲೆ ಹೆಚ್ಚಿರುವ ಸ್ವಾತಂತ್ರ್ಯವಿದೆ ಎಂದರು.

ಎನ್‌ಪಿ‍ಪಿಎ ಸಭೆಯ ನಿರ್ಧಾರ ಏನು? ಮಾರ್ಚ್‌ 20ರಂದು ನಡೆದ ಎನ್‌ಪಿ‍ಪಿಎ ಸಭೆಯಲ್ಲಿ ಡಬ್ಲ್ಯುಪಿಐ ಆಧಾರದ ಮೇಲೆ ಶೆಡ್ಯೂಲ್ಡ್‌ ಪಟ್ಟಿಯಲ್ಲಿರುವ ಔಷಧಗಳ ಬೆಲೆಯನ್ನು ಶೇ 0.00551ರಷ್ಟು ಹೆಚ್ಚಿಸಲಾಗಿದೆ. ಹಾಗಾಗಿ 782 ಔಷಧಗಳ ಗರಿಷ್ಠ ಬೆಲೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. 2025ರ ಮಾರ್ಚ್‌ 31ರ ವರೆಗೂ ಈ ದರ ಮುಂದುವರಿಯಲಿದೆ ಎಂದು ಎನ್‌ಪಿಪಿಐ ಹೇಳಿದೆ. 54 ಔಷಧಗಳ ಗರಿಷ್ಠ ಬೆಲೆಯು ₹90ರಿಂದ ₹261 ಇದ್ದು ಅಲ್ಪ ‍ಪ್ರಮಾಣದಲ್ಲಿ (ಶೇ 0.01) ಏರಿಕೆ ಮಾಡಲಾಗಿದೆ. ಸರ್ಕಾರವು ಇಷ್ಟು ಪ್ರಮಾಣದಲ್ಲಿ ದರ ಏರಿಕೆಗೆ ಅನುಮತಿ ನೀಡಿರುವುದರಿಂದ  ಕಂಪನಿಗಳು ದರ ಏರಿಸಬಹುದು ಅಥವಾ ಏರಿಕೆ ಮಾಡದೆಯೂ ಇರಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.